ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯಲ್ಲಿ ಇಂದು ವಿರೋಧ ಪಕ್ಷದ ಸಂಸದರು ಒಟ್ಟಾಗಿ ಮಹಾ ಕುಂಭಮೇಳದ ಕಾಲ್ತುಳಿತ ಪ್ರಕರಣಕ್ಕೆ ಸಂಬಧಿಸಿದಂತೆ ಸರ್ಕಾರ ಉತ್ತರ ನೀಡಬೇಕು ಎಂದು ಘೋಷಣೆ ಕೂಗಲು ಆರಂಭಿಸಿದರು. ಈ ವೇಳೆ ವಿಪಕ್ಷಗಳ ಸಂಸದರ ವಿರುದ್ಧ ಸ್ಪೀಕರ್ ಓಂ ಬಿರ್ಲಾ ಹರಿಹಾಯ್ದಿದ್ದಾರೆ.
ಜನರು ಅವರನ್ನು ಘೋಷಣೆ ಕೂಗಲು ಕಳುಹಿಸಿದ್ದರೆ ಕೂಗಲು ಬಿಡಿ, ಸದನ ಮುಂದುವರಿಯಲಿ ಎಂದು ಗರಂ ಆಗಿ ಉತ್ತರಿಸಿದರು.
ಪ್ರಶ್ನೋತ್ತರ ಅವಧಿಯು ಸರ್ಕಾರದ ಹೊಣೆಗಾರಿಕೆಯನ್ನು ಸರಿಪಡಿಸುವ ಮಹತ್ವದ ಸಮಯವಾಗಿದೆ. ಸದನ ನಡೆಯಲು ಅವಕಾಶ ನೀಡುವಂತೆ ಓಂ ಬಿರ್ಲಾ ಮೊದಲು ವಿರೋಧ ಪಕ್ಷದ ಸದಸ್ಯರಿಗೆ ಮನವಿ ಮಾಡಿದರು. ಸಮಾಜವಾದಿ ಪಕ್ಷದ ಕೆಲವು ಸದಸ್ಯರು ವೇದಿಕೆಯ ಬಳಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದಾಗ, ಓಂ ಬಿರ್ಲಾ, ಸಾರ್ವಜನಿಕರು ನಿಮ್ಮನ್ನು ಟೇಬಲ್ ಒಡೆಯಲು ಕಳುಹಿಸಿಲ್ಲ, ಪ್ರಶ್ನೆಗಳನ್ನು ಕೇಳಲು ಕಳುಹಿಸಲಾಗಿದೆ. ದೇಶದ ಜನರು ನಿಮ್ಮನ್ನು ಘೋಷಣೆಗಳನ್ನು ಕೂಗಲು ಕಳುಹಿಸಿದ್ದರೆ, ಅದೇ ಕೆಲಸವನ್ನು ಮಾಡಿ ಎಂದು ಹೇಳಿದರು.
ನೀವು ಸದನವನ್ನು ನಡೆಸಲು ಬಯಸಿದರೆ ಹೋಗಿ ನಿಮ್ಮ ಆಸನದಲ್ಲಿ ಕುಳಿತುಕೊಳ್ಳಿ. ಪ್ರಶ್ನೋತ್ತರ ಅವಧಿಯ ನಂತರ ಪ್ರತಿಪಕ್ಷದ ಸದಸ್ಯರಿಗೆ ಮಾತನಾಡಲು ಹಾಗೂ ನಿಮಗೆ ಸಾಕಷ್ಟು ಸಮಯ ಮತ್ತು ಅವಕಾಶವನ್ನು ನೀಡಲಾಗುವುದು ಎಂದರು.
ಇದೇ ವಿಚಾರಕ್ಕೆ ರಾಜ್ಯಸಭೆಯಲ್ಲಿ ಗದ್ದಲ ನಡೆಯಿತು. ವಿರೋಧ ಪಕ್ಷಗಳ ಎಲ್ಲ ಸಂಸದರು ರಾಜ್ಯಸಭೆಯಿಂದ ಹೊರನಡೆದರು.