ಹೊಸದಿಗಂತ ಡಿಜಿಟಲ್ ಡೆಸ್ಕ್ :
ಮುಂಬೈ (Mumbai) ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಂಗೆ ಗುರುವಾರ ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ ಮುಂಬೈಯಲ್ಲಿ 26/11 ದಾಳಿಯಂತೆಯೇ (26/11 attacks) ಭಯೋತ್ಪಾದಕ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ.
ಉರ್ದುವಿನಲ್ಲಿ ಮಾತನಾಡಿದ ವ್ಯಕ್ತಿ, ಸೀಮಾ ಹೈದರ್ (Seema Haider) ಹಿಂತಿರುಗದಿದ್ದರೆ ಭಾರತ ನಾಶವಾಗುತ್ತದೆ. ದಾಳಿ ನಡೆದರೆ ಅದಕ್ಕೆ ಉತ್ತರ ಪ್ರದೇಶ ಸರ್ಕಾರವೇ ಹೊಣೆಯಾಗಲಿದೆ ಎಂದು ಹೇಳಿದ್ದಾನೆ.
ಮುಂಬೈ ಪೊಲೀಸ್ ಟ್ರಾಫಿಕ್ ಕಂಟ್ರೋಲ್ ರೂಂಗೆ ಜುಲೈ 12 ರಂದು ಈ ಕರೆ ಬಂದಿದ್ದು, ಮುಂಬೈ ಪೊಲೀಸರು ಮತ್ತು ಕ್ರೈಂ ಬ್ರಾಂಚ್ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇದೊಂದು ಹುಸಿ ಕರೆ. ನಾವು ಹೆಚ್ಚಿನ ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ ಯಾರು ಕರೆ ಮಾಡಿದ್ದಾರೆ ಎಂಬುದರ ಪರಿಶೀಲನೆ ನಡೆಯುತ್ತಿದೆ ಎಂದು ಮುಂಬೈ ಪೊಲೀಸರ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಗೇಮಿಂಗ್ ಅಪ್ಲಿಕೇಶನ್ PUBG ಮೊಬೈಲ್‌ನಲ್ಲಿ ಭೇಟಿಯಾದ ವ್ಯಕ್ತಿಯೊಂದಿಗೆ ಇರಲು ಪಾಕಿಸ್ತಾನದ ಮಹಿಳೆ ಸೀಮಾ ಹೈದರ್ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ ಸೂಕ್ತ ದಾಖಲೆಗಳಿಲ್ಲದೆ ಗ್ರೇಟರ್ ನೋಯ್ಡಾದಲ್ಲಿ ತಂಗಿದ್ದಕ್ಕಾಗಿ ಈ ತಿಂಗಳ ಆರಂಭದಲ್ಲಿ ಆಕೆಯನ್ನು ಬಂಧಿಸಲಾಗಿತ್ತು.
ನ್ಯಾಯಾಲಯದಿಂದ ಜಾಮೀನು ಪಡೆದ ನಂತರ, ಸೀಮಾ ಹೈದರ್ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು ಸಚಿನ್ ಪ್ರೀತಿಗಾಗಿ ತನ್ನ ಸರ್ ನೇಮ್ ಕೈಬಿಟ್ಟಿದ್ದಾಳೆ. ತನ್ನ ಹೊಸ ನಂಬಿಕೆಗೆ ತಕ್ಕಂತೆ ತನ್ನ ಮಕ್ಕಳ ಹೆಸರನ್ನು ಬದಲಾಯಿಸಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾಳೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಖೈರ್‌ಪುರ್ ಜಿಲ್ಲೆಯ ನಿವಾಸಿಯಾಗಿರುವ ಸೀಮಾ ಮೊದಲು ನೇಪಾಳಕ್ಕೆ ಪ್ರಯಾಣ ಬೆಳೆಸಿದರು. ಮೇ 13 ರಂದು ಪಬ್-ಜಿಯಲ್ಲಿ ಭೇಟಿಯಾದ ತನ್ನ ಪ್ರೇಮಿಯನ್ನು ಭೇಟಿಯಾಗುವುದಕ್ಕಾಗಿ ಸೂಕ್ತ ದಾಖಲೆಗಳಿಲ್ಲದೇ ಭಾರತವನ್ನು ಪ್ರವೇಶಿಸಿದರು. ಅಂದಿನಿಂದ, ಅವಳು ಮತ್ತು ಸಚಿನ್ ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದಲ್ಲಿ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು.