ಹೊಸದಿಗಂತ ಡಿಜಿಟಲ್ ಡೆಸ್ಕ್, ಬೆಂಗಳೂರು:
ಸದ್ಯ ವೆಂಟಿಲೇಟರ್ ನಲ್ಲಿರುವ ಕಾಂಗ್ರೆಸ್ ಸಿದ್ದರಾಮೋತ್ಸವದ ಬಳಿಕ ಸಂಪೂರ್ಣ ಸರ್ವನಾಶವಾಗಲಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಪಿ. ರಾಜೀವ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಾತನಾಡಿದ ಅವರು, ರಾಜೀವ್ ಗಾಂಧಿಯನ್ನು ಹತ್ಯೆ ಮಾಡಿದ ಹಂತಕರ ಬಗ್ಗೆ ಸಹಾನುಭೂತಿ ಹೊಂದಿದ ಸಂಘಟನೆಗಳ ಜೊತೆ ಸಿದ್ದರಾಮಯ್ಯ ಸಖ್ಯವನ್ನು ಬೆಳೆಸುತ್ತಿದ್ದಾರೆ. 1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ಎಲ್‍ಟಿಟಿಇ ಹತ್ಯೆ ಮಾಡಿತ್ತು. ರಾಜೀವ್ ಗಾಂಧಿಯನ್ನು ಹತ್ಯೆ ಮಾಡಿದ ಹಂತಕರನ್ನು ಬಿಡುಗಡೆ ಮಾಡಬೇಕೆಂದು ವಿಸಿಕೆ ಪಾರ್ಟಿ ದೊಡ್ಡ ಹೋರಾಟವನ್ನು ಮಾಡಿತ್ತು. ಎಲ್‍ಟಿಟಿಇ ಮುಖಂಡ ಪ್ರಭಾಕರನ್ ಹುಟ್ಟುಹಬ್ಬ ಆಚರಣೆಯನ್ನು ತನ್ನ ಪ್ರಣಾಳಿಕೆಯಲ್ಲಿ ಇಲ್ಲಿನವರೆಗೆ ಇಟ್ಟುಕೊಂಡು ಬಂದ ಪಕ್ಷ ವಿಸಿಕೆ ಎಂದು ವಿವರಿಸಿದರು.
ವಿಸಿಕೆ ಪಕ್ಷ ಕೊಟ್ಟ ಪ್ರಶಸ್ತಿಯನ್ನು ಸಿದ್ದರಾಮಯ್ಯ ಸ್ವೀಕರಿಸಿದ್ದಾರೆ. ಒಂದುವೇಳೆ ಸಿದ್ದರಾಮಯ್ಯರಿಗೆ ಪಕ್ಷ ನಿಷ್ಠೆ ಇದ್ದಿದ್ದರೆ, ಗಾಂಧಿ ಕುಟುಂಬದ ಬಗ್ಗೆ ಗೌರವ ಇದ್ದಿದ್ದರೆ ಈ ಪ್ರಶಸ್ತಿಯನ್ನು ಅವರು ತಿರಸ್ಕರಿಸಬೇಕಿತ್ತು. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬ ಪ್ರಶ್ನೆಯನ್ನು ಕರ್ನಾಟಕಕ್ಕೆ ಭೇಟಿ ಕೊಡುತ್ತಿರುವ ರಾಹುಲ್ ಗಾಂಧಿಯವರ ಮುಂದೆ ಬಿಜೆಪಿ ಇಡುತ್ತಿದೆ. ಅವರ ಉತ್ತರ ನಿರೀಕ್ಷಿಸುವುದಾಗಿ ಹೇಳಿದರು.
ಸಿದ್ದರಾಮಯ್ಯನವರು ಈ ಪ್ರಶಸ್ತಿ ಸ್ವೀಕರಿಸಿ ಗಾಂಧಿ ಕುಟುಂಬಕ್ಕೆ ಅವಮಾನ ಮಾಡಿದಂತಲ್ಲವೇ? ಹಂತಕರನ್ನು ಬೆಂಬಲಿಸಿದ ಹಾಗಾಗಲಿಲ್ಲವೇ? ಎಂದೂ ಅವರು ಪ್ರಶ್ನೆಗಳನ್ನು ಮುಂದಿಟ್ಟರು.
ಅಧಿಕಾರ ಮತ್ತು ಅನುಕೂಲಕ್ಕೆ ಸಿದ್ದರಾಮಯ್ಯ ಏನನ್ನಾದರೂ ಮಾಡುತ್ತಾರೆ ಎಂದು ಆರೋಪಿಸಿದ ಅವರು, ಸಿದ್ಧಾಂತ ಹೇಳುವುದಕ್ಕೆ ಮಾತ್ರ. ಅದು ಆಚರಣೆಗೆ ಅಲ್ಲ ಎಂದು ನಂಬಿರುವ ರಾಜಕಾರಣಿ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ ಎಂದು ಟೀಕಿಸಿದರು.
ಸಮಾಜವಾದಿ ಸಿದ್ದರಾಮಯ್ಯ ಹೂಬ್ಲೆಟ್ ವಾಚನ್ನು ಕಟ್ಟುತ್ತಾರೆ. ಲೋಹಿಯಾವಾದಿ ಸಿದ್ದರಾಮಯ್ಯ ಅರ್ಕಾವತಿ ಡಿ ನೋಟಿಫಿಕೇಶನ್ ಅನ್ನು ರೀಡೂ ಮಾಡ್ತಾರೆ. ಎಲೆಕ್ಷನ್ ಹತ್ತಿರ ಬಂದಾಗ ಅಹಿಂದ ಜಪ ಮಾಡುತ್ತಾರೆ. ಕಾಂಗ್ರೆಸ್ ಪಕ್ಷದ ಎಲ್ಲ ದಲಿತ ನಾಯಕರನ್ನು ತುಳಿದು ಬೆಳೆದ ಸಿದ್ದರಾಮಯ್ಯರಿಗೆ ಡಾ.ಅಂಬೇಡ್ಕರ್ ಪ್ರಶಸ್ತಿ ಸ್ವೀಕರಿಸಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
2013ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ದಲಿತ ನಾಯಕ ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಅವರನ್ನು ಕುತಂತ್ರದ ಮೂಲಕ ಸೋಲಿಸಿದರು. ಮಲ್ಲಿಕಾರ್ಜುನ ಖರ್ಗೆಯವರನ್ನು ಮೆಲ್ಲಗೆ ಮೂಲೆಗುಂಪು ಮಾಡಿ ಕೂರಿಸಿದರು. ಈಗ ಡಿ.ಕೆ.ಶಿವಕುಮಾರರಿಗೆ ಖೆಡ್ಡಾ ತೋಡಲು ಸಿದ್ದರಾಮೋತ್ಸವ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಇವತ್ತು ಕಾಂಗ್ರೆಸ್ ಪಕ್ಷ ಯಾವ ದಾರುಣ ಸ್ಥಿತಿಗೆ ಬಂದಿದೆ ಎಂದರೆ ಸ್ವತಃ ರಾಹುಲ್ ಗಾಂಧಿಯವರು ಅಸಹಾಯಕರಾಗಿ ಸಿದ್ದರಾಮಯ್ಯನವರ ವ್ಯಕ್ತಿಪೂಜೆಯನ್ನು ಮೂಕಪ್ರೇಕ್ಷಕರಾಗಿ ನೋಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಗೋಳಾಟ ಅರಣ್ಯ ರೋದನವಾಗಿದೆ ಎಂದು ವ್ಯಂಗ್ಯವಾಡಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ