ಹೊಸದಿಗಂತ ಬಾಗಲಕೋಟೆ :
ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಬರುವ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸುವ ಕುರಿತು ರಾಜ್ಯ ಸರ್ಕಾರ ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ತೃಪ್ತಿ ದಾಯಕ ನಿರ್ಣಯ ಕೈಗೊಳ್ಳದಿದ್ದರೆ ಜ.1ರಂದು ಬೆಂಗಳೂರಿನ ವಿಧಾನಸೌಧ ಮುಂದೆ ನೇಣು ಹಾಕಿಕೊಳ್ಳಲು ನಿರ್ಣಯಿಸಿದ್ದೇನೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಮುಖಂಡ ನಾಗೇಶ ಗೋಲಶೆಟ್ಟಿ ಹೇಳಿದ್ದಾರೆ.
ನವನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಯುಕೆಪಿ ಯೋಜನೆ ಪೂರ್ಣಗೊಳಿಸುವಂತೆ ಹಿಂದೆ ಆಮರಣ ಉಪವಾಸ ನಡೆಸಿದರೂ ಕೇವಲ ಸರ್ಕಾರ ಭರವಸೆ ನೀಡಿತು ಆದರೆ ಸರ್ಕಾರ ಮಾತ್ರ ಈ ಭಾಗದ ನೀರಾವರಿ ಯೋಜನೆಗೆ ಒತ್ತು ನೀಡುತ್ತಿಲ್ಲ ಎಂದು ದೂರಿದರು.
ಕಾವೇರಿ, ಮೇಕೆದಾಟು ಯೋಜನೆಗೆ ಒತ್ತು ನೀಡುವ ರಾಜ್ಯ ಸರ್ಕಾರ ಆ ಯೋಜನೆಯ ಮೂರುಪಟ್ಟು ದೊಡ್ಡದಾದ ನೀರಾವರಿ ಯೋಜನೆ ಪೂರ್ಣಗೊಳಿಸಲು ಸರ್ಕಾರ ಕಾಳಜಿ ನೀಡುತ್ತಿಲ್ಲ ಎಂದು ದೂರಿದರು.
ಸರ್ಕಾರ ಯುಕೆಪಿ ಯೋಜನೆ ಬಗ್ಗೆ ಅಧಿವೇಶನದಲ್ಲಿ ಸೂಕ್ತ ನಿರ್ಣಯ ಕೈಗೊಂಡು ಯೋಜನೆ ಪೂರ್ಣಕ್ಕೆ ತಕ್ಷಣ ಕೆಲಸ ಮಾಡಲು ಸರ್ಕಾರ ಮುಂದಾಗದಿದ್ದರೆ ವಿಧಾನಸೌಧದ ಮುಂದೆ ನೇಣು ಹಾಕಿಕೊಳ್ಳುವೆ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದರು. ಎ.ಎ.ದಂಡಿಯಾ ಪತ್ರಿಕಾಗೋಷ್ಠಿಯಲ್ಲಿ ಇದ್ದರು.