ಪತ್ನಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೆ ಪತಿಯಿಂದ ಎಲ್ಲ ಹಕ್ಕುಗಳನ್ನು ಕಳೆದುಕೊಂಡಂತೆ: ಹೈಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪತ್ನಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೆ ವಿಚ್ಛೇದನವಾಗಿಲ್ಲದಿದ್ದರೂ ಪತಿಯಿಂದ ಎಲ್ಲ ಹಕ್ಕುಗಳನ್ನು ಕಳೆದುಕೊಂಡಂತೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ .

ಕೌಟುಂಬಿಕ ದೌಜನ್ಯ ನಡೆಯದಿದ್ದರೂ, ಪರಿಹಾರವನ್ನು ಮಂಜೂರು ಮಾಡಿದ್ದ ನಗರದ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾಜಾಜಿನರದ ನಿವಾಸಿ ಕೃಷ್ಣ (ಹೆಸರು ಬದಲಿಸಲಾಗಿದೆ)ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರಿದ್ದ ನ್ಯಾಯಪೀಠ, ಪತಿಯಿಂದ ದೌಜನ್ಯಕ್ಕೊಳಗಾಗಿರುವುದು ಸಾಬೀತಾಗದಿದ್ದಲ್ಲಿ ಕೌಟುಂಬಿಕ ದೌರ್ಜನ್ಯಗಳಿಂದ ಮಹಿಳೆಯ ರಕ್ಷಣಾ ಕಾಯಿದೆಯಡಿ ಪರಿಹಾರ ನೀಡಲಾಗದು ಎಂದು ತಿಳಿಸಿದೆ.ಜೊತೆಗೆ ಪರಿಹಾರ ನೀಡುವಂತೆ ಆದೇಶಿಸಿದ್ದ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದು ಮಾಡಿದೆ.

ಪ್ರಕರಣದಲ್ಲಿ ದಂಪತಿ ನಡುವೆ ವಿಚ್ಛೇದನವಾಗಿಲ್ಲದಿದ್ದರೂ, ಪತ್ನಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿರುವುದರಿಂದ ಇಬ್ಬರ ನಡುವಿನ ವಿವಾಹದ ಹಕ್ಕುಗಳು ರದ್ದುಗೊಂಡಂತಾಗಿದೆ. ಜೊತೆಗೆ, ಕೌಟುಂಬಿಕ ದೌರ್ಜನ್ಯ ನಡೆದಿಲ್ಲ ಎಂಬುದಾಗಿ ಕೌಟುಂಬಿಕ ಹಾಗೂ ಸೆಷನ್ಸ್ ನ್ಯಾಯಾಲಯ ನೀಡಿರುವ ಆದೇಶವನ್ನು ಗೀತಾ ಪ್ರಶ್ನಿಸಿಲ್ಲ ಎಂದು ಕೋರ್ಟ್​ ತಿಳಿಸಿದೆ.

ಕೌಟುಂಬಿಕ ದೌಜನ್ಯದಿಂದ ಮಹಿಳೆಯರ ರಕ್ಷಣೆ ಕಾಯಿದೆಯಡಿ ಸೆಕ್ಷನ್ 22ರ ಪ್ರಕಾರ, ನೊಂದ ವ್ಯಕ್ತಿಗೆ ಮಾನಸಿಕ ಚಿತ್ರಹಿಂಸೆ, ಭಾವನಾತ್ಮಕ ಯಾತನೆಯಿಂದ ಉಂಟಾದ ನೋವಿಗೆ ಪರಿಹಾರ ಪಾವತಿಸಬೇಕು . ಹೀಗಾಗಿ ದೌರ್ಜನ್ಯ ನಡೆಸಿರುವುದು ಸಾಬೀತಾದಲ್ಲಿ ಪರಿಹಾರ ನೀಡಬಹುದು. ಆದರೆ, ಪ್ರಸ್ತುತ ಪ್ರಕರಣದಲ್ಲಿ ದೌರ್ಜನ್ಯ ಸಾಬೀತಾಗಿಲ್ಲ. ಜೊತೆಗೆ ಪತ್ನಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದಾರೆ. ಅಲ್ಲದೇ, ಪತಿ ಕೃಷ್ಣ ಅವರು ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಪರಿಹಾರ ನೀಡಲಾಗದು ಎಂದು ಪೀಠ ತಿಳಿಸಿ, ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ
ಅರ್ಜಿದಾರ ಕೃಷ್ಣ ಅವರು ವಿದ್ಯಾರಣ್ಯಪುರದ ಗೀತಾ ಎಂಬುವರನ್ನು 2000ದಲ್ಲಿ ವಿವಾಹವಾಗಿದ್ದು, ದಂಪತಿಗೆ ಒಂದು ಹೆಣ್ಣು ಮತ್ತು ಗಂಡು ಮಗು ಜನಿಸಿತ್ತು. ಆದರೆ, ಕಾರಣಾಂತರಗಳಿಂದ ಗಂಡು ಮಗು ಮೃತಪಟ್ಟಿತ್ತು. ಇದರ ನಡುವೆ ಪತ್ನಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ಪತಿಯು ಕೌಟುಂಬಿಕ ದೌರ್ಜನ್ಯ ನಡೆಸುತ್ತಿದ್ದು, ಪರಿಹಾರ ಕೊಡಿಸಬೇಕು ಎಂದು ಕೋರಿದ್ದರು. ಆದರೆ, ಅರ್ಜಿಯ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಕೌಟುಂಬಿಕ ದೌರ್ಜನ್ಯ ನಡೆದಿರುವ ಕುರಿತು ಸಾಕ್ಷ್ಯಾಧಾರಗಳಿಲ್ಲ. ಹೀಗಾಗಿ ಪರಿಹಾರ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿ ಆದೇಶಿಸಿತ್ತು. ಪ್ರಶ್ನಿಸಿ ಗೀತಾ ಸೆಷನ್ಸ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಕೌಟುಂಬಿಕ ದೌರ್ಜನ್ಯ ನಡೆಸಿರುವ ಕುರಿತು ಸಾಕ್ಷ್ಯಾಧಾರಗಳಿಲ್ಲ. ಪರಿಣಾಮ ಮಾಸಿಕ ನಿರ್ವಹಣಾ ವೆಚ್ಚ ನೀಡಲಾಗದು. ಆದರೆ, ಅರ್ಜಿದಾರರ ಜೀವನ ನಿರ್ವಹಣೆ ಮತ್ತು ಆರೋಗ್ಯದ ಕಾರಣದಿಂದ ಜೀವನಾಂಶವಾಗಿ 4 ಲಕ್ಷ ರೂ. ಪಾವತಿ ಮಾಡಬೇಕು ಎಂದು ಕೃಷ್ಣ ಅವರಿಗೆ ಸೂಚನೆ ನೀಡಿತ್ತು. ಪ್ರಶ್ನಿಸಿ ಕೃಷ್ಣ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!