ತಾಕತ್ತಿದ್ದರೆ ಸಿದ್ದರಾಮಯ್ಯ ಮಡಿಕೇರಿ ಕ್ಷೇತ್ರದಿಂದ ಸ್ಪರ್ಧಿಸಲಿ: ಅಪ್ಪಚ್ಚು ರಂಜನ್ ಸವಾಲು

ಹೊಸದಿಗಂತ ವರದಿ, ಮಡಿಕೇರಿ:

ತಾಕತ್ತಿದ್ದರೆ ಸಿದ್ದರಾಮಯ್ಯ ಮಡಿಕೇರಿ ಕ್ಷೇತ್ರದಿಂದ ಮುಂದಿನ ಚುನಾವಣೆಗೆ ಸ್ಪಧಿ೯ಸಲಿ. ಠೇವಣಿ ಕಳೆದುಕೊಳ್ಳುವಂತೆ ಮಾಡಿ ಕೊಡಗಿನಲ್ಲಿ ಬಿಜೆಪಿ ತಾಕತ್ತು ತೋರುತ್ತೇವೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಸವಾಲು ಹಾಕಿದ್ದಾರೆ.
ಮಡಿಕೇರಿಯಲ್ಲಿ ಜಿಲ್ಲಾ ಬಿಜೆಪಿಯಿಂದ‌ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವರು ದನದ ಮಾಂಸ ತಿನ್ನುತ್ತಾರೆ ಎಂದು ಹೇಳಿಕೆ ನೀಡಿ ಕೊಡವರ ಭಾವನೆಗಳಿಗೆ ಘಾಸಿ ಉಂಟುಮಾಡಿದ್ದಾರೆ. ಟಿಪ್ಪು ಜಯಂತಿ ಆಚರಣೆಗೆ ಕಾರಣರಾಗಿದ್ದ ಸಿದ್ದರಾಮಯ್ಯ ವಿರುದ್ದ ಕೊಡಗಿನಲ್ಲಿ ತೀವ್ರ ಆಕ್ರೋಶವೂ ಇದೆ. ಹೀಗಾಗಿಯೇ ಮೊನ್ನೆ ಕಪ್ಪುಬಾವುಟ ಹಿಡಿದು ಪ್ರತಿಭಟನೆ ನಡೆಸಲಾಗಿದೆ. ಇದು ಬಿಟ್ಟು ಮೊಟ್ಟೆ ಎಸೆದ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿಲ್ಲ ಎಂದು ಸಮರ್ಥಿಸಿಕೊಂಡರು.
ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದವರು ಬಿಜೆಪಿಯವರಾಗಿದ್ದರೆ ಖಂಡಿತಾ ಪಕ್ಷದಿಂದ ಅಮಾನತು ಮಾಡುತ್ತೇವೆ.ಆದರೆ ಮೊಟ್ಟೆ ಎಸೆದವರು ಕಾಂಗ್ರೆಸ್ ಬೆಂಬಲಿತ ಎಂಬುದು ಅನೇಕರಿಗೆ ಗೊತ್ತಿದೆ. ಪೊಲೀಸರ ತನಿಖೆಯಲ್ಲಿ ಸತ್ಯ ತಿಳಿಯಲಿದೆ ಎಂದು ಅವರು ನುಡಿದರು.
ಆ.26 ರಂದು ಕಾಂಗ್ರೆಸ್ ಮಡಿಕೇರಿಯಲ್ಲಿ ಸಮಾವೇಶ ಹಮ್ಮಿಕೊಂಡಿರುವುದು ಟಿಪ್ಪು ಕೈಗೊಂಡಿದ್ದ ದಂಡಯಾತ್ರೆಗೆ ಸಮಾನ ಎಂದು ಶಾಸಕ ಕೆ.ಜಿ.ಬೋಪಯ್ಯ ಕಿಡಿಕಾರಿದರು.
ಟಿಪ್ಪು 32 ಬಾರಿ ಕೊಡಗಿಗೆ ಆಕ್ರಮಣ ಮಾಡಿ ಕೊಡಗನ್ನು ನಾಶ ಮಾಡಿದ್ದ. ಈಗ ಟಿಪ್ಪು ಸಂತತಿಯ ಓಲೈಕೆಗಾಗಿ ಕಾಂಗ್ರೆಸ್ ಕೊಡಗಿಗೆ 33 ನೇ ಬಾರಿಗೆ ಬರುತ್ತಿದೆ. ಈ ಬಾರಿ ಕೊಡಗಿನ ಜನ ಟಿಪ್ಪು ಬೆಂಬಲಿಗರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಅಯ್ಯಪ್ಪ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರನ್ನು ವರ್ಗಾಯಿಸುವ ಉದ್ದೇಶ ಖಂಡಿತಾ ಇಲ್ಲ. ಅಲ್ಲದೆ ವರ್ಗಾವಣೆ ದಂಧೆಯಲ್ಲಿ ನಾವಿಲ್ಲ ಎಂದು ಶಾಸಕದ್ವರು ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್‌ ದೇವಯ್ಯ ದೂರಿದರು.
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಆ.26 ರಂದು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಜನಜಾಗೃತಿ ಸಮಾವೇಶ ನಡೆಯಲಿದೆ. ಜಿಲ್ಲೆಯ ಮೂಲೆಮೂಲೆಗಳಿಂದ ಒಂದು ಲಕ್ಷ ಜನರನ್ನು ಸೇರಿಸಿ ಸಮಾವೇಶ ನಡೆಸುವ ಗುರಿ ಹೊಂದಲಾಗಿದೆ. ಅಂದು ಲಕ್ಷಾಂತರ ಮಂದಿ ಮಡಿಕೇರಿಯಲ್ಲಿ ಸೇರಲಿರುವುದರಿಂದ ಪರಿಸ್ಥಿತಿಯನ್ನು ನಿಭಾಯಿಸುವ ಹೊಣೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಮೇಲಿದೆ ಎಂದು ಅವರುಗಳು ನುಡಿದರು.
ತಿಹಾರ್ ಜೈಲಿಗೆ ಹೋಗಿ ಬಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಂದ ಕೊಡಗಿನ ಬಿಜೆಪಿ ಶಾಸಕರಿಗೆ ಉಪದೇಶ ಬೇಕಾಗಿಲ್ಲ ಎಂದು ರಾಬಿನ್ ದೇವಯ್ಯ ಅವರು ಇದೇ ಸಂದರ್ಭ ಗುಡುಗಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ಬಿ.ಬಿ.ಭಾರತೀಶ್, ಮಾದಪ್ಪ, ಅರುಣ್ ಭೀಮಯ್ಯ, ಅನಿತಾ ಪೂವಯ್ಯ‌ ಮತ್ತಿತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!