ಹೊಸದಿಗಂತ ವರದಿ, ಬಾಗಲಕೋಟೆ:
ಪಕ್ಷದಿಂದ ಮತ್ತೊಮ್ಮೆ ವಿಜಯಪುರದಿಂದ ಸ್ಪರ್ಧೆ ಮಾಡಲು ಪಕ್ಷ ಟಿಕೆಟ್ ಕೊಟ್ಟರೆ ನಿಲ್ಲುತ್ತೇನೆ. ಟಿಕೆಟ್ ಕೊಡದಿದ್ದರೆ ಮನೆಯಲ್ಲಿ ಮೊಮ್ಮಕ್ಕಳನ್ನು ಆಡಿಸುತ್ತಾ ಸುಮ್ಮನಿರುತ್ತೇನೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.
ಜಿಲ್ಲೆಯ ಬೀಳಗಿ ತಾಲ್ಲೂಕಿನ ಅನಗವಾಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸನಗೌಡ ಪಾಟೀಲ ಯತ್ನಾಳ ಮತ್ತು ನಾವು ಸರಿಯಿಲ್ಲ ಎನ್ನುವುದಕ್ಕೆ ನಾವೇನು ಜಗಳಾಡಿದ್ದೀವಾ. ಪತ್ರಿಕೆ ಹೇಳಿಕೆಗೆ ಮಾತ್ರ ನಾವೊಂದು ಅವರೊಂದು ಹೇಳಿಕೆ ಕೊಡುತ್ತೇವೆ.
ಪತ್ರಿಕೆ ಹೇಳಿಕೆ ಬೇರೆ ವೈಯಕ್ತಿಕವಾಗಿ ಚೆನ್ನಾಗಿ ಇರೋದೇ ಬೇರೆ. ನಿಮ್ಮಂತವರು ಕೇಳುವುದರಿಂದ ಪತ್ರಿಕೆ ಹೇಳಿಕೆ ಕೊಟ್ಟಿರುತ್ತೇವೆ. ನಮ್ಮ ಇಬ್ಬರ ಮನಸ್ಸು ಒಂದೇಯಾಗಿದೆ. ನನಗೂ ಆತ ಸಹಾಯ ಮಾಡಿದ್ದಾನೆ. ನಾನು ಸಹ ಅವನಿಗೆ ಸಹಾಯ ಮಾಡಿದ್ದೇನೆ. ನಮ್ಮಿಬ್ಬರ ಮಧ್ಯೆ ಯಾವುದೇ ಭೀನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು. ನೀವೇ ಸುಮ್ಮನೇ ಭಿನ್ನಾಭಿಪ್ರಾಯ ಎಂದು ಬಿಂಬಿಸುತ್ತಿದ್ದೀರಿ ಎಂದು ಮಾಧ್ಯಮದವರಿಗೆ ಹೇಳಿದರು.