ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೌದು…ಈ ಅಭ್ಯಾಸವೇನಾದರೂ ನಿಮಗೆ ಇದ್ದರೆ ಖಂಡಿತಾ ಇಂದಿನಿಂದ ಬಿಟ್ಟುಬಿಡಿ. ಅನೇಕ ಮಂದಿಗೆ ಇದೊಂದು ಕೆಟ್ಟ ಅಭ್ಯಾಸ ರೂಢಿಯಾಗಿಬಿಟ್ಟಿದೆ. ಸುಮ್ಮನೆ ಕೂರುವಾಗ, ಮಾತನಾಡುವಾಗ ತಮ್ಮ ಬೆರಳ ಉಗುರುಗಳನ್ನು ಕಚ್ಚುವ ಚಾಳಿ ಬೆಳೆಸಿಕೊಂಡಿರುತ್ತಾರೆ. ಇದು ದೇಹ ಕೇಂದ್ರಿತ ಪುನರಾವರ್ತಿತ ನಡವಳಿಕೆಯಾಗಿದ್ದು ವೈದ್ಯಕೀಯ ಭಾಷೆಯಲ್ಲಿ ಒನಿಕೊಫೇಜಿಯಾ ಎಂದು ಕರೆಯುತ್ತಾರೆ.
ಉಗುರುಗಳನ್ನು ಕಚ್ಚಿ ತುಂಡರಿಸಿ, ಉಗಿಯುವ ಚಟ ಅನೇಕರಿಗಿರುತ್ತದೆ. ಇದರಿಂದ ಎಷ್ಟು ಹಾನಿಯಿದೆ ಎಂದು ಗೊತ್ತಾದರೆ ಬೆಚ್ಚಿಬೀಳುವುದಂತೂ ಗ್ಯಾರಂಟಿ.
ಹಲ್ಲುಗಳಿಂದ ಉಗುರುಗಳನ್ನು ಕಚ್ಚಿದಾಗ ಉಗುರ ಸಂದಿಯಲ್ಲಿ, ಬೆರಳಲ್ಲಿರುವ ಬೆವರು, ಕೊಳಕಿನಂಶಗಳು ಬಾಯಿಯ ಮೂಲಕ ದೇಹಕ್ಕೆ ಸೇರುತ್ತದೆ. ಇದರಿಂದಾಗಿ ಅನೇಕ ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಉಗುರು ಕಚ್ಚುವ ಚಾಳಿಯಿಂದಾಗಿ ಬೆರಳು ಹಾಗೂ ಉಗುರುಗಳ ಸೋಂಕಿಗೆ ಕಾರಣವಾಗುತ್ತದೆ. ಚರ್ಮದ ಸಮಸ್ಯೆಯೂ ಉದ್ಭವಿಸುತ್ತವೆ. ರೋಗಾಣುಗಳು ಒಂದು ಬೆರಳಿನಿಂದ ಮತ್ತೊಂದು ಬೆರಳಿಗೆ ವರ್ಗಾವಣೆಯಾಗಿ ಅಂಟುರೋಗವೂ ಉಂಟಾಗುವ ಸಾಧ್ಯತೆಯಿರುತ್ತದೆ.
ಉಗುರು ಕಚ್ಚುವ ಸಂದರ್ಭದಲ್ಲಿ ಹಲ್ಲುಗಳು ಹಾನಿಯಾಗುವ ಸಾಧ್ಯತೆಯಿರುತ್ತವೆ. ವಸಡಿನ ತೊಂದರೆಯೂ ಉಂಟಾಗುವ ಸಂಭವವಿದೆ. ಉಸಿರಾಟದ ಸಮಸ್ಯೆಗೂ ಇದು ಕಾರಣವಾಗಬಲ್ಲದು. ಉಗುರು ಕಡಿಯುವುದರಿಂದ ಉಗುರಿನ ಅಂದ ಕೆಡುತ್ತದೆ. ರೂಪ, ಆಕಾರಕ್ಕೂ ಹಾನಿಯಾಗುತ್ತದೆ.