ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾದ ಜನಸಂಖ್ಯೆ ಕುಸಿತವನ್ನು ಕಡಿಮೆ ಮಾಡಿ ಮತ್ತೆ ಜನಸಂಖ್ಯೆ ಹೆಚ್ಚಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೊಸ ಕ್ರಮವೊಂದನ್ನು ಘೋಷಿಸಿದ್ದಾರೆ. 10ಕ್ಕಿಂತ ಹೆಚ್ಚು ಮಕ್ಕಳನ್ನು ಹೊಮದಿರುವ ಮಹಿಳೆಯರಿಗೆ ಒಂದು ಲಕ್ಷ ರೂಬಲ್ (13,500 ಪೌಂಡ್) ಹಣವನ್ನು ನೀಡುವುದಾಗಿ ಹೇಳಿದ್ದಾರೆ. ಆ ಮೂಲಕ ಅಲ್ಲಿನ ಮಹಿಳೆಯರಿಗೆ ಹೆಚ್ಚಿನ ಮಕ್ಕಳಿಗೆ ಜನ್ಮ ನೀಡಲು ಪ್ರೋತ್ಸಾಹಿಸಲಾಗುತ್ತಿದೆ.
ಉಕ್ರೇನ್ ಯುದ್ಧ ಮತ್ತು ಕೋವಿಡ್ ಸಾಂಕ್ರಾಮಿಕದಿಂದಾಗಿ ರಷ್ಯಾದ ಜನಸಂಖ್ಯೆಯ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಈ ಹೊಡೆತವನ್ನು ಸರಿಪಡಿಸಲು ಪುಟಿನ್ ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಮದರ್ ಹಿರೋಯಿನ್ ಎಂಬ ಹೆಸರಿನ ಈ ಯೋಜನೆಯು ಹತ್ತು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಮಹಿಳೆಯರಿಗೆ ನಗದು ರೂಪದ ಬಹುಮಾನ ನೀಡುತ್ತದೆ. ಹತ್ತನೇ ಮಗುವಿನ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿ, ಉಳಿದ ಒಂಬತ್ತು ಮಕ್ಕಳೂ ಜೀವಂತವಾಗಿದ್ದರೆ ಪುಟಿನ್ ಸರ್ಕಾರ ಅವರಿಗೆ ಒಂದು ಲಕ್ಷ ರೂಬಲ್ (13,500 ಪೌಂಡ್) ಹಣವನ್ನು ನೀಡಲಿದೆ.
ದೊಡ್ಡ ಕುಟುಂಬಗಳನ್ನು ಹೊಂದಿರುವ ಜನರು ಹೆಚ್ಚು ದೇಶಭಕ್ತರು ಎಂದು ಪುಟಿನ್ ಹೇಳುತ್ತಾರೆ ಎಂದು ಮೂಲಗಳು ಉಲ್ಲೇಖಿಸಿವೆ. ಈ ಹಿನ್ನೆಲೆಯಲ್ಲಿ ಜನಸಂಖ್ಯಾ ಬಿಕ್ಕಟ್ಟನ್ನು ಸರಿದೂಗಿಸಲು ಅಲ್ಲಿನ ಮಹಿಳೆಯರಿಗೆ ಹೆಚ್ಚು ಮಕ್ಕಳಿಗೆ ಜನ್ಮ ನೀಡಲು ಪ್ರೋತ್ಸಾಹಿಸಲಾಗುತ್ತಿದೆ.