ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂಬೇಡ್ಕರ್ ಹೆಸರನ್ನು ಪದೇ ಪದೇ ಹೇಳುವುದು ಫ್ಯಾಷನ್ ಆಗಿ ಬಿಟ್ಟಿದೆ. ಅಷ್ಟೊಂದು ಬಾರಿ ಭಗವಂತನ ಹೆಸರು ಹೇಳಿದ್ದರೆ ಏಳು ಜನ್ಮಗಳವರೆಗೆ ಸ್ವರ್ಗದಲ್ಲಿ ಇರಬಹುದಿತ್ತು’ ಎಂದು ಬುಧವಾರ ಸಂಸತ್ತಿನಲ್ಲಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಬಹಿರಂಗ ಪತ್ರ ಬರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಬುಧವಾರ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಬರೆದುಕೊಂಡಿರುವ ಅವರು, ಸನ್ಮಾನ್ಯ ಅಮಿತ್ ಶಾ ಅವರೇ, ಮೊದಲಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಭಾರತೀಯ ಜನತಾ ಪಕ್ಷದ ಅಂತರಂಗದ ಅಭಿಪ್ರಾಯವನ್ನು ಬಹಿರಂಗವಾಗಿ ಧೈರ್ಯದಿಂದ ದೇಶದ ಮುಂದೆ ತೆರೆದಿಟ್ಟದ್ದಕ್ಕಾಗಿ ಮತ್ತು ಕೊನೆಗೂ ನಿಮ್ಮ ಜೀವಮಾನದಲ್ಲಿ ಒಂದು ಸತ್ಯವನ್ನಾದರೂ ಹೇಳಿದ್ದಕ್ಕೆ ನಿಮ್ಮನ್ನು ಅಭಿನಂದಿಸುತ್ತೇನೆ. ನಿಮ್ಮ ಮಾತಿನಿಂದ ನಮಗೆ ಆಶ್ಚರ್ಯವಾಗಿಲ್ಲ, ನಮಗೆ ಇದು ಗೊತ್ತಿತ್ತು.
ಸಂಸತ್ ನಲ್ಲಿ ಆಡಿದ ನಿಮ್ಮ ಮಾತಿನಿಂದ ಇಡೀ ದೇಶಕ್ಕೆ ನಿಮ್ಮ ಅಂತರಂಗದ ಅರಿವಾಗಿದೆ. ಬಾಬಾಸಾಹೇಬ್ ಅವರು ಕೊಟ್ಟ ಸಂವಿಧಾನದಡಿಯಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಸಂಸತ್ ನಲ್ಲಿ ನಿಂತು ಅವರ ಸ್ಮರಣೆಯನ್ನು ವ್ಯಸನ ಎಂದು ತುಚ್ಛೀಕರಿಸುವ ನಿಮ್ಮ ಧಾಷ್ಟ್ರಕ್ಕೆ ಶಹಭಾಸ್ ಅನ್ನಲೇಬೇಕು.. ಅಮಿತ್ ಶಹಾ ಅವರೇ, ‘’ಬಾಬಾಸಾಹೇಬರ ಬಗ್ಗೆ ತಮಗೆ ಅಪಾರ ಅಭಿಮಾನ ಇದೆ, ಗೌರವ ಇದೆ, ನನ್ನ ಮಾತುಗಳನ್ನು ತಿರುಚಲಾಗಿದೆ’’ ಎಂದೆಲ್ಲ ಸ್ಪಷ್ಟೀಕರಣ ಕೊಟ್ಟು ಆತ್ಮವಂಚನೆ ಮಾಡಿಕೊಳ್ಳಬೇಡಿ. ಅದನ್ನು ಸಮರ್ಥಿಸಿಕೊಂಡು ದೇಶವನ್ನು ಎದುರಿಸಿ ಎಂದಿದ್ದಾರೆ.