ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು: ರಾಜ್ಯದಲ್ಲಿ ಗಾಂಭೀರ್ಯತೆ ಇಲ್ಲದ ಕಾಂಗ್ರೆಸ್ ಸರಕಾರ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯ ಸರಕಾರದ ಕಾರ್ಯವೈಖರಿ ಖಂಡನೀಯ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಉಡುಪಿಯ ಅರೆವೈದ್ಯಕೀಯ ಕಾಲೇಜಿನ ಶೌಚಾಲಯದೊಳಗೆ ವಿಡಿಯೋ ಚಿತ್ರೀಕರಣ ವಿಚಾರ ರಾಜ್ಯಾದ್ಯಂತ, ದೇಶಾದ್ಯಂತ ಸದ್ದು ಮಾಡುತ್ತಿದೆ. ಆದರೆ, ವಿಡಿಯೋ ಮಾಡಿದ ವಿದ್ಯಾರ್ಥಿನಿಯರಾದ ಶಬನಾಜ್, ಅಲಿಫಾ, ಆಲಿಯಾರನ್ನು ಇನ್ನೂ ಬಂಧಿಸಿಲ್ಲ ಎಂದು ಟೀಕಿಸಿದರು. ಇದು ತಮಾಷೆಯ ವಿಚಾರವಲ್ಲ. ರಾಜ್ಯದ ಮಹಿಳೆಯರ ಸುಕರ್ಷತೆಯ ದೃಷ್ಟಿಯಿಂದ ಈ ಘಟನೆಯನ್ನು ಎನ್‍ಐಎಗೆ ಕೊಡಿ ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.
ಬೆಡ್‍ರೂಂ, ಶೌಚಾಲಯ, ಬಾತ್ ರೂಂನಲ್ಲಿ ಯಾರೂ ವಿಡಿಯೋ ಮಾಡುವುದಿಲ್ಲ. ಉಡುಪಿ ಘಟನೆಯ ಆರೋಪಿಗಳನ್ನು ಕರ್ನಾಟಕ ಸರಕಾರ ಯಾಕೆ ಬಂಧಿಸಿಲ್ಲ? ಇದರಲ್ಲೂ ತುಷ್ಟೀಕರಣ ನೀತಿ ಅನುಸರಿಸಲಾಗುತ್ತಿದೆಯೇ ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.
ತಮಾಷೆಗಾಗಿ ವಿಡಿಯೋ ಮಾಡಿ ಡಿಲೀಟ್ ಮಾಡಿದ್ದಾರೆ. ಇದು ಮಕ್ಕಳಾಟ ಎಂದು ರಾಜ್ಯದ ಗೃಹ ಸಚಿವರು ಹೇಳಿದ್ದಾರೆ. ಇದು ಮಕ್ಕಳಾಟವೇ? ಹೆದರಿಸುವುದು ಮಕ್ಕಳಾಟವೇ? ಸರಕಾರಕ್ಕೆ ಗಾಂಭೀರ್ಯತೆಯೇ ಇಲ್ಲ ಎಂದು ಆಕ್ಷೇಪಿಸಿದರು. ರಾಜ್ಯದ ಅಭಿವೃದ್ಧಿ, ಮಹಿಳಾ ಸುರಕ್ಷತೆ ಬಗ್ಗೆ ರಾಜ್ಯ ಸರಕಾರಕ್ಕೆ ಗಾಂಭೀರ್ಯತೆ ಇಲ್ಲ ಎಂದು ಟೀಕಿಸಿದರು.
ಜುಲೈ 18ರಂದು ಘಟನೆ ಬೆಳಕಿಗೆ ಬಂದಿದೆ. ಬಿಜೆಪಿ ಪ್ರತಿಭಟನೆ ಬಳಿಕ 26ರಂದು ಎಫ್‍ಐಆರ್ ಮಾಡಿದ್ದಾರೆ. ಅಗೆದಷ್ಟೂ ವಿಚಾರ ಆಳಕ್ಕೆ ಹೋಗುತ್ತಿದೆ. ಈ ಥರದ ಘಟನೆ ಆರೇಳು ತಿಂಗಳಿಂದ ನಡೆಯುತ್ತಿದೆ ಎಂದು ಕಾಲೇಜು ವಿದ್ಯಾರ್ಥಿನಿಯರೇ ಹೇಳುತ್ತಿದ್ದಾರೆ. ಇದರ ಹಿಂದೆ ದೊಡ್ಡ ಜಾಲ ಇದೆ ಎಂದು ಆರೋಪಿಸಿದರು. ಅದು ಪಿಎಫ್‍ಐ ಇದೆಯೋ, ಜಿಹಾದಿ ಸಂಘಟನೆಗಳಿವೆಯೇ?- ಇದರ ಬಗ್ಗೆ ತನಿಖೆ ಮಾಡಬೇಕು ಎಂದರು.
ವಿಡಿಯೋ ರೆಕಾರ್ಡ್ ಆದ ಮೊಬೈಲನ್ನು ಹುಡುಗರು ಒಯ್ಯುತ್ತಿದ್ದರೆಂಬ ಮಾಹಿತಿ ಸಿಕ್ಕಿದೆ. ವಿಡಿಯೋ ಪಡೆಯಲು ಬರುತ್ತಿದ್ದ ಹುಡುಗರು ಯಾರು? ಪಿಎಫ್‍ಐ ಜಾಲದ ಅನೇಕ ಮಹಿಳೆಯರೂ ಇದರಲ್ಲಿ ಇರುವುದಾಗಿ ಗೊತ್ತಾಗುತ್ತಿದೆ. ಸಮಗ್ರ ತನಿಖೆಗಾಗಿ ಎನ್‍ಐಎಗೆ ಕೊಡಿ ಎಂದು ಒತ್ತಾಯಿಸಿದರು.
ನಿನ್ನೆ ತುಮಕೂರಿನಲ್ಲಿ ‘ನಿಮ್ಮ ಮನೆಯವರಾದರೆ ಸುಮ್ಮನೆ ಬಿಡುತ್ತಿದ್ದಿರಾ’ ಎಂದು ಟ್ವೀಟ್ ಮಾಡಿದ್ದಕ್ಕಾಗಿ ಎಚ್‍ಎಸ್ ಶಕುಂತಲಾ ಎಂಬ ಸಾಮಾಜಿಕ ಕಾರ್ಯಕರ್ತೆಯನ್ನು ಅರೆಸ್ಟ್ ಮಾಡಿ ಹೈಗ್ರೌಂಡ್ ಪೊಲೀಸ್ ಠಾಣೆಗೆ ತಂದಿದ್ದಾರೆ. ನಾನು ಹೋಗಿದ್ದೆ. ಈಗ ಅವರನ್ನು ಜಾಮೀನಿನಡಿ ಬಿಡುಗಡೆ ಮಾಡುತ್ತಿದ್ದಾರೆ ಎಂದರಲ್ಲದೆ, ಟ್ವೀಟ್ ಮಾಡಿದವರನ್ನು ಕೂಡಲೇ ಬಂಧಿಸಲಾಗುತ್ತದೆ. ಆದರೆ, ವಿಡಿಯೋ ಚಿತ್ರೀಕರಣ ಮಾಡಿದವರನ್ನು ಬಂಧಿಸಿಲ್ಲವೇಕೆ? ಟ್ವೀಟ್ ಮಾಡಿದ ರಶ್ಮಿ ಸಾಮಂತ್ ಅವರ ಮನೆಗೆ ತೆರಳಿ ಹೆದರಿಸಲಾಗುತ್ತದೆ. ಇಷ್ಟೊಂದು ತುಷ್ಟೀಕರಣವೇ? ಇಷ್ಟೊಂದು ಓಲೈಕೆ ರಾಜಕಾರಣವೇ? ಈ ಸಮಾಜದಿಂದ ನ್ಯಾಯ ನಿರೀಕ್ಷೆ ಮಾಡುವುದೇ ತಪ್ಪಾ? ಈ ಸಮಾಜ ಎಲ್ಲಿಗೆ ಹೋಗುತ್ತಿದೆ? ಎಂದು ಕೇಳಿದರು.
ಸರಕಾರ ತಡಮಾಡದೆ ವಿದ್ಯಾರ್ಥಿನಿಯರು, ಜಾಲದಲ್ಲಿರುವ ಯುವಕರನ್ನು ಬಂಧಿಸಬೇಕು ಎಂದು ವಿನಂತಿಸಿದ ಅವರು, ಸರಕಾರ ನಮ್ಮ ಸಾಮಾಜಿಕ ಜಾಲತಾಣದ ಸಕ್ರಿಯ ಕಾರ್ಯಕರ್ತರನ್ನು ಕೇಸು ಹಾಕುವುದಾಗಿ ಹೆದರಿಸುತ್ತಿದೆ. ಬಂಧಿಸುವುದಾಗಿ ತಿಳಿಸುತ್ತಿದೆ. ಇದೇ ಮಾದರಿಯಲ್ಲಿ ಪೋಸ್ಟ್ ಮಾಡುವ ಕಾಂಗ್ರೆಸ್ಸಿನ ಕಾರ್ಯಕರ್ತರನ್ನೂ ಪ್ರಕರಣ ದಾಖಲಿಸಿ ಬಂಧಿಸಿ ಎಂದು ಆಗ್ರಹಿಸಿದರು. ಕಾನೂನು, ಸಂವಿಧಾನ, ಪೊಲೀಸ್ ಠಾಣೆ ಎಲ್ಲರಿಗೂ ಸಮಾನ ತಾನೇ? ಎಂದು ಕೇಳಿದರು.
ನೀವು ಪ್ರಧಾನಿ, ಪ್ರಮುಖರ ಬಗ್ಗೆ ಅನೇಕ ಟ್ವೀಟ್ ಮಾಡಿದ್ದೀರಲ್ಲವೇ? ನಾವು ಕೂಡ ವಿವರ ಕೊಡುತ್ತೇವೆ. ಅರೆಸ್ಟ್ ಮಾಡುವಿರಾ ಎಂದು ಕೇಳಿದರು. ದ್ವೇಷದ ರಾಜಕಾರಣ ಸರಿಯಲ್ಲ ಎಂದು ನುಡಿದರು. ಹೋರಾಟ, ಪ್ರತಿಭಟನೆಗಳು ಮುಂದುವರೆಯಲಿದೆ ಎಂದು ಅವರು ಎಚ್ಚರಿಸಿದರು.
ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.