Monday, December 22, 2025

ನಿಮ್ಮ ಡ್ರೈವಿಂಗ್ ಲೈಸನ್ಸ್ ಅವಧಿ ಮುಗಿದಿದ್ದರೆ ಬೇಗನೇ ನವೀಕರಿಸಿ….ಇಲ್ಲವಾದರೆ: ಸುಪ್ರೀಂ ಕೋರ್ಟ್ ಏನು ಹೇಳಿದೆ ನೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಮೊದಲು, ಚಾಲನಾ ಪರವಾನಗಿ ಅವಧಿ ಮುಗಿದರೂ, ಅದನ್ನು ನವೀಕರಿಸುವವರೆಗೆ 30 ದಿನಗಳವರೆಗೆ ವಾಹನ ಚಾಲನೆ ಮಾಡಲು ಅವಕಾಶವಿತ್ತು. ಆದರೆ 2019ರ ತಿದ್ದುಪಡಿಯ ನಂತರ ಈ ನಿಯಮ ಬದಲಾಗಿದೆ.

ಪರವಾನಗಿ ಎಕ್ಸ್ ಪೈರ್ ಆಗಿದ್ದರೂ ವಾಹನಗಳನ್ನು ಚಲಾಯಿಸುವುದು ಕಾನೂನು ಬಾಹಿರ ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ.

ಈಗ, ಪರವಾನಗಿ ಅವಧಿ ಮುಗಿದ ತಕ್ಷಣವೇ, ಅಂದರೆ ಮರುದಿನದಿಂದಲೇ, ಪರವಾನಗಿ ನವೀಕರಿಸದಿದ್ದರೆ ವಾಹನ ಚಾಲನೆ ಮಾಡಲು ಕಾನೂನು ಅವಕಾಶ ನೀಡುವುದಿಲ್ಲ. ಪರವಾನಗಿ ಅವಧಿ ಮುಗಿದ ಮರುದಿನದಿಂದಲೇ ಚಾಲನೆ ಮಾಡಲು ಅನರ್ಹರಾಗುತ್ತಾರೆ. ಪರವಾನಗಿ ನವೀಕರಿಸದೆ ವಾಹನ ಚಾಲನೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ತೆಲಂಗಾಣ ಹೈಕೋರ್ಟ್‌ನ ತೀರ್ಪಿನ ವಿರುದ್ಧ ತೆಲಂಗಾಣ ರಾಜ್ಯ ಮಟ್ಟದ ಪೊಲೀಸ್ ನೇಮಕಾತಿ ಮಂಡಳಿ (TSLPRB) ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ವೇಳೆ ಈ ತೀರ್ಪು ಹೊರಬಿದ್ದಿದೆ. ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನತುಲ್ಲಾ ಮತ್ತು ನ್ಯಾಯಮೂರ್ತಿ ಎಸ್.ವಿ.ಎನ್. ಭಟ್ಟಿ ಅವರಿದ್ದ ದ್ವಿಸದಸ್ಯ ಪೀಠ ಈ ಮಹತ್ವದ ಸ್ಪಷ್ಟೀಕರಣ ನೀಡಿದೆ.

ಒಬ್ಬ ವ್ಯಕ್ತಿ ತನ್ನ ಪರವಾನಗಿಯನ್ನು ನಿಯಮಿತವಾಗಿ ನವೀಕರಿಸುತ್ತಾ ಹೋದರೆ, ಅವನ ಪರವಾನಗಿ ಹಲವು ವರ್ಷಗಳವರೆಗೆ ನಿರಂತರವಾಗಿ ಇರುತ್ತದೆ. ಅಂದರೆ, ಮೊದಲ ಪರವಾನಗಿ ನೀಡಿದ ನಂತರ, ಅದು ಮುಗಿಯುವ ಮುನ್ನವೇ ನವೀಕರಣಗೊಳ್ಳುತ್ತಾ ಹೋಗುತ್ತದೆ. ಹೀಗೆ, ಆ ವ್ಯಕ್ತಿ ಪರವಾನಗಿ ಮುಗಿಯುವ ಮುನ್ನವೇ ನವೀಕರಿಸುತ್ತಾ ಹೋದರೆ, ಅಧಿಸೂಚನೆಗಳಲ್ಲಿ ನಿಗದಿಪಡಿಸಿದ ಅರ್ಹತೆಯ ವ್ಯಾಪ್ತಿಗೆ ಬರುತ್ತಾನೆ ಎಂದು ನ್ಯಾಯಪೀಠ ಹೇಳಿದೆ.

ನ್ಯಾಯಾಲಯವು ಚಾಲನೆ ಎನ್ನುವುದು ಕೇವಲ ಕಾಗದದ ಮೇಲಿನ ಅರ್ಹತೆ ಮಾತ್ರವಲ್ಲ, ಅದು ಪ್ರತಿನಿತ್ಯವೂ ವಾಹನ ಚಲಾವಣೆಯ ಮೂಲಕ ಪಡೆಯಬಹುದಾದ ಪ್ರಾಯೋಗಿಕ ಅನುಭವ ಎಂದಿರುವ ನ್ಯಾಯಪೀಠ,.ಪರವಾನಗಿ ಇದ್ದರೂ, ವಾಹನ ಚಾಲನೆ ಮಾಡುವ ಅನುಭವ ಮತ್ತು ಅಭ್ಯಾಸ ಇಲ್ಲದಿದ್ದರೆ ಅದು ಪ್ರಯೋಜನಕ್ಕೆ ಬರುವುದಿಲ್ಲ. ಹಾಗಾಗಿ, ಪರವಾನಗಿ ಪಡೆದವರು ಪ್ರತಿನಿತ್ಯ ಅಥವಾ ಆಗಾಗ ವಾಹನ ಚಲಾವಣೆ ಮಾಡುತ್ತಿರಬೇಕು. ಅದರಿಂದ ಪ್ರಾಯೋಗಿಕ ಅನುಭವ ಸಿಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.

error: Content is protected !!