ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳಿನ ನಟ ದಳಪತಿ ವಿಜಯ್ ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದಾರೆ.
ಇದರ ನಡುವೆ ಇತ್ತೀಚೆಗೆ ಪಕ್ಷದ ವತಿಯಿಂದ ಇಫ್ತಾರ್ ಕೂಟವನ್ನು ವಿಜಯ್ ಆಯೋಜಿಸಿದ್ದರು. ಸ್ವತಃ ತಾವೂ ಸಹ ಮುಸ್ಲೀಮರು ತೊಡುವ ಟೋಪಿ ತೊಟ್ಟು ನಮಾಜು ಮಾಡಿದ್ದರು. ಆದರೆ ಮುಸ್ಲೀಮರ ಬೆಂಬಲ ಪಡೆಯಲು ಮಾಡಿದ್ದ ಈ ಪ್ರಯತ್ನ, ಇದೀಗ ವಿಜಯ್ಗೆ ಮುಳುವಾಗಿ ಪರಿಣಮಿಸಿದೆ. ವಿಜಯ್ ವಿರುದ್ಧ ಇಸ್ಲಾಂ ಧರ್ಮೀಯರಿಂದಲೇ ದೂರು ದಾಖಲಾಗಿದೆ.
ತಮಿಳುನಾಡು ಸುನ್ನತ್ ಜಮಾತ್, ಇದೀಗ ದಳಪತಿ ವಿಜಯ್ ವಿರುದ್ಧ ದೂರು ದಾಖಲು ಮಾಡಿದ್ದು, ವಿಜಯ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಇಸ್ಲಾಂ ಧರ್ಮಕ್ಕೆ ಅವಮಾನ ಆಗಿದೆ ಎಂದು ಆರೋಪಿಸಿದ್ದಾರೆ. ಚೆನ್ನೈನ ಪೊಲೀಸ್ ಆಯುಕ್ತರಿಗೆ ವಿಜಯ್ ವಿರುದ್ಧ ದೂರು ನೀಡಲಾಗಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಸಿ ದೂರು ದಾಖಲು ಮಾಡುವಂತೆ ಮನವಿ ಮಾಡಲಾಗಿದೆ.
ವಿಜಯ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಕುಟುಕರು, ರೌಡಿಗಳು ಭಾಗವಹಿಸಿದ್ದಿದ್ದು ನಮ್ಮ ಗಮನಕ್ಕೆ ಬಂದಿದೆ. ಉಪವಾಸ ಮಾಡದ, ರಂಜಾನ್ನ ಬಗ್ಗೆ ಗೌರವ ಇಲ್ಲದ ಇಂಥಹವರ ಭಾಗವಹಿಸುವಿಕೆಯಿಂದ ಮುಸ್ಲೀಂ ಸಮುದಾಯಕ್ಕೆ ಅವಮಾನ ಆಗಿದೆ. ಅಲ್ಲದೆ ಇಫ್ತಾರ್ ಕೂಟದ ಆಯೋಜನೆ ಸಹ ಅತ್ಯಂತ ಬೇಜವಾಬ್ದಾರಿಯಿಂದ ಕೂಡಿತ್ತು, ವಿಜಯ್ರ ಭದ್ರತೆಯವರು ಅಲ್ಲಿ ಸೇರಿದ್ದವರನ್ನು ಕೆಟ್ಟದಾಗಿ ನಡೆಸಿಕೊಂಡರು, ಜನರನ್ನು ಹಸುಗಳಂತೆ ಎಳೆದು ಬಿಸಾಡುತ್ತಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಿಜಯ್ ಅವರು ಚೆನ್ನೈನ ವೈಎಂಸಿಎ ಗ್ರೌಂಡ್ಸ್ನಲ್ಲಿ ಕೆಲ ದಿನದ ಹಿಂದೆ ಇಫ್ತಾರ್ ಕೂಟ ಆಯೋಜನೆ ಮಾಡಿದ್ದರು. ಅಂದು ವಿಜಯ್ ಸಹ ಮುಸ್ಲೀಮರೊಟ್ಟಿಗೆ ಸೇರಿ ನಮಾಜು ಮಾಡಿದ್ದರು. ವಿಜಯ್, ಇಫ್ತಾರ್ ಕೂಟ ಆಯೋಜನೆ ಮಾಡಿದ್ದಕ್ಕೆ ಟೀಕೆಗೆ ಗುರಿ ಆಗಿದ್ದರು. ಈಗ ಸ್ವತಃ ಮುಸ್ಲೀಮರೇ ತಮಗೆ ವಿಜಯ್ ಅವಮಾನ ಮಾಡಿದ್ದಾರೆಂದು ಆರೋಪಿಸಿ ದೂರು ದಾಖಲಿಸಿದ್ದಾರೆ.