ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನ ಮನೆಯಲ್ಲಿ ವಾಸವಾಗಿದ್ದ ನಿವೃತ್ತ ಡಿಜಿ, ಐಜಿಪಿ ಓಂ ಪ್ರಕಾಶ್ ಅವರ ಕೊಲೆಯ ಹಿಂದೆ ಕೌಟುಂಬಿಕ ಕಲಹದ ನೆರಳು ಕಂಡುಬಂದಿದೆ.
ಈ ಬಗ್ಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಬಹಳಷ್ಟು ಮಾಹಿತಿಗಳನ್ನು ಕಲೆಹಾಕಿದ್ದಾರೆ. ಈ ನಡುವೆ ಓಂ ಪ್ರಕಾಶ್ ಅವರನ್ನು ಅವರ ಪತ್ನಿಯೇ ಕೊಲೆಗೈದರೆ ಎಂಬ ಅನುಮಾನ ಕೂಡಾ ದಟ್ಟವಾಗಿದ್ದು, ಸದ್ಯ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಓಂ ಪ್ರಕಾಶ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಇವರ ನಡುವೆ ವೈಯಕ್ತಿಕ ವಿಚಾರಗಳಲ್ಲಿ ಮನಸ್ತಾಪ, ಆಗಾಗ ಗಲಾಟೆ ಕೂಡಾ ನಡೆಯುತ್ತಿತ್ತು. ವಾರದ ಹಿಂದಷ್ಟೇ ಅವರ ಪತ್ನಿ ಪೊಲೀಸ್ ಅಧಿಕಾರಿಗಳಿಗೆ ಮೆಸೇಜ್ ಮಾಡಿ, ತನಗೆ ಹಾಗೂ ಮಗಳಿಗೆ ಸಾಕಷ್ಟು ಹಿಂಸೆ ನೀಡುತ್ತಿದ್ದಾರೆ. ಅವರ ವಿರುದ್ಧ ಸುಮೋಟೋ ಕೇಸ್ ದಾಖಲಿಸುವಂತೆ ಮನವಿ ಮಾಡಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ.
ಇನ್ನೊಂದೆಡೆ ಓಂ ಪ್ರಕಾಶ್ ಪತ್ನಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರು ಅನ್ನೋ ಮಾಹಿತಿ ಕೂಡಾ ಲಭ್ಯವಾಗಿದೆ.
ಪತಿ ಗನ್ ಹಿಡಿದು ಮನೆಯಲ್ಲಿ ಓಡಾಡ್ತಾರೆ. ಪ್ರತಿ ಬಾರಿ ಶೂಟ್ ಮಾಡುವೆ ಎಂದು ಭಯ ಬೀಳಿಸ್ತಾರೆ. ಬಿಯರ್ ಬಾಟಲ್, ಚಾಕುವಿನಿಂದ ಚುಚ್ಚಿದ್ದಾರೆ ಎಂದು ಹೇಳಿರುವ ಪತ್ನಿ ಇದೇ ಭಯದಲ್ಲಿ ಪತಿಯ ಹತ್ಯೆ ಮಾಡಿದರೇ ಎಂಬ ಪ್ರಶ್ನೆ ಕಾಡುತ್ತಿದ್ದು, ಪೊಲೀಸ್ ತನಿಖೆ ಬಳಿಕವಷ್ಟೇ ನಿಜಾಂಶ ಬೆಳಕಿಗೆ ಬರಲಿದೆ.