ಅಕ್ರಮ ಡಿನೋಟಿಫಿಕೇಷನ್: ಬಿಎಸ್‌ವೈ, ಎಚ್‌ಡಿಕೆ ವಿರುದ್ಧ ದಾಖಲೆ ಬಿಡುಗಡೆಗೊಳಿಸಿದ ಕಾಂಗ್ರೆಸ್ ಸಚಿವರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಕ್ರಮ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಎಚ್​​ಡಿ ಕುಮಾರಸ್ವಾಮಿ ವಿರುದ್ಧದ ರಾಜ್ಯ ಕಾಂಗ್ರೆಸ್ ಸಚಿವರು ದಾಖಲೆ ಬಿಡುಗಡೆ ಮಾಡಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಚಿವರಾದ ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್ ಅವರು ಬಿಎಸ್​ವೈ ಹಾಗೂ ಎಚ್​ಡಿಕೆ ವಿರುದ್ಧದ ಅಕ್ರಮ ಡಿನೋಟಿಫಿಕೇಷನ್​ಗೆ ಸಂಬಂಧಿಸಿದಂತೆ ಕೆಲ ದಾಖಲೆಗಳನ್ನು ಬಿಡುಗಡೆಗೊಳಿಸಿದರು.

ದಾಖಲೆ ಬಿಡುಗಡೆ ಬಳಿಕ ಮಾತನಾಡಿದ ಕೃಷ್ಣಬೈರೇಗೌಡ, ರಾಜ್ಯಪಾಲರು ಕೆಲವು ಪ್ರಕರಣಗಳಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ತಪ್ಪು ಮಾಡಿದವರಿಗೆ ರಾಜ್ಯಪಾಲರು ರಕ್ಷಣೆ ನೀಡುತ್ತಿದ್ದಾರೆ. ಇವರು ಮಾಡಿದ ಅಕ್ರಮ ಒಂದೆರಡಲ್ಲ, ಇವರ ಹಲವಾರು ಅಕ್ರಮಗಳಲ್ಲಿ ಮತ್ತೊಂದು ದಾಖಲೆ ಇದು. ಆಸ್ತಿ ಇರುವುದು ಮಠದ ಹಳ್ಳಿ ಗಂಗೇನಹಳ್ಳಿ ಬಡಾವಣೆ 7/1ಬಿ, ಸಿ ಹಾಗೂ ಡಿ ಸರ್ವೆ ನಂಬರ್ ನಲ್ಲಿ 1.11 ಎಕರೆ ಜಮೀನು ಬಿಡಿಎಗೆ ಭೂಸ್ವಾಧಿನಗೊಂಡಿರುತ್ತದೆ. ಇದನ್ನು ಡಿನೋಟಿಫೈ ಮಾಡಬೇಕು ಅಂತ ಯಾರೋ ರಾಜಶೇಖರಯ್ಯ ಅನ್ನೋರು ಅರ್ಜಿ ಕೊಡ್ತಾರೆ. ದಾರಿಯಲ್ಲಿ ಹೋಗುವ ಯಾರೋ ದಾಸಯ್ಯ ಜಮೀನಿಗೆ ಸಂಬಂಧವೇ ಇಲ್ಲದ ರಾಜಶೇಖರಯ್ಯ ಅನ್ನುವವರ ಅರ್ಜಿ ಕೊಡ್ತಾರೆ. 22.08.2007 ರಲ್ಲಿ ಅರ್ಜಿ ಬಂದ ಅದೇ ದಿನ ಸಿಎಂ ಆಗಿದ್ದ ಎಚ್ಡಿಕೆ ಡಿನೋಟಿಫೈ ಮಾಡಲು ಸೂಚಿಸುತ್ತಾರೆ ಎಂದು ಗಂಭೀರ ಆರೋಪ ಮಾಡಿದರು.

ಜಮೀನಿನ ಅಸಲಿ ಮಾಲೀಕರು 21 ಜನರಿದ್ದಾರೆ. 30 ವರ್ಷಗಳ ಹಿಂದೆಯೇ ಈ ಜಮೀನೂ ಭೂಸ್ವಾಧೀನ ಆಗಿತ್ತು. ಯಾವುದು ಭೂ ಸ್ವಾಧೀನ ಆಗಿತ್ತೋ ಆ ಜಮೀನಿಗೆ ಕುಮಾರಸ್ವಾಮಿ ಅತ್ತೆ ಅನಿತಾ ಕುಮಾರಸ್ವಾಮಿ ತಾಯಿ ಜಿಪಿಎ ಮಾಡಿಕೊಳ್ಳುತ್ತಾರೆ. ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಡಿನೋಟಿಫೈ ಮಾಡಲು ಬರುವುದಿಲ್ಲ ಎಂದು ಫೈಲ್ ತಿರಸ್ಕಾರ ಮಾಡುತ್ತಾರೆ. ಆದರೂ ಅಂದಿನ ಸಿಎಂ ಕುಮಾರಸ್ವಾಮಿ ಡಿನೋಟಿಫೈ ಮಾಡುವಂತೆ ಸೂಚಿಸುತ್ತಾರೆ. ಬಳಿಕ ಸರ್ಕಾರ ಬದಲಾಗಿ ಯಡಿಯೂರಪ್ಪ ಸಿಎಂ ಆಗುತ್ತಾರೆ. ಆಗ ಮತ್ತೆ ಅದೇ ಫೈಲ್ ಸಿಎಂ ಯಡಿಯೂರಪ್ಪ ಕೈಗೆ ಬರುತ್ತದೆ. ಕಾನೂನು ಗಾಳಿಗೆ ತೂರಿ ಯಡಿಯೂರಪ್ಪ 2010 ಜೂನ್ 5ರಂದು ರಂದು ಭೂಸ್ವಾಧೀನದಿಂದ ಕೈ ಬಿಡುತ್ತಾರೆ ಎಂದು ಹೇಳಿದರು.

ಡಿ ನೋಟಿಫಿಕೇಷನ್ ಆದ ಒಂದೇ ತಿಂಗಳಿಗೆ ಕುಮಾರಸ್ವಾಮಿ ಬಾಮೈದ ಚನ್ನಪ್ಪ ಎಂಬುವವರಿಗೆ ಶುದ್ದ ಕ್ರಯಪತ್ರ ಆಗುತ್ತದೆ . ಹೀಗೆ ಅಕ್ರಮವಾಗಿ ಡಿನೋಟಿಫೈ ಆದ ಜಮೀನು ಕುಮಾರಸ್ವಾಮಿ ಕುಟುಂಬಕ್ಕೆ ಸೇರಿದೆ. ಇದು ವ್ಯವಸ್ಥಿತ ವಂಚನೆ ಹೌದೋ ಅಲ್ವೋ? ಇದು ನೇರವಾಗಿ ಕುಮಾರಸ್ವಾಮಿ ಆದೇಶದಿಂದಲೇ ಆಗಿದೆ. ಕುಮಾರಸ್ವಾಮಿ ಪುಟಫ್ ಮಾಡಿದ ಫೈಲ್ ಗೆ ಯಡಿಯೂರಪ್ಪ ಸಹಿ ಮಾಡಿದ್ದಾರೆ. ಸಾರ್ವಜನಿಕ ಸ್ವತ್ತನ್ನು ತಂತ್ರಗಾರಿಕೆ ಮಾಡಿ ಲೂಟಿ ಮಾಡಿದ್ದೀರ ಕುಮಾರಸ್ವಾಮಿಯವರೇ ಎಂದು ಆರೋಪಿಸಿದರು.

ಲೋಕಾಯುಕ್ತದವರು ಈ ಪ್ರಕರಣ ತನಿಖೆ ನಡೆಸುತ್ತಿದ್ದಾರೆ. ಲೋಕಾಯುಕ್ತ ತಕ್ಷಣ ಪ್ರಕರಣದ ತನಿಖೆ ಶೀಘ್ರ ಮಾಡಬೇಕು. ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ವಿರುದ್ದ ಎಫ್​ಐಆರ್ ದಾಖಲಾಗಿ ಒಂಭತ್ತು ವರ್ಷಗಳಾಗಿದೆ. ಹೈ ಕೋರ್ಟ್ ತನಿಖೆಗೆ ಸೂಚನೆ ನೀಡಿದ್ದರೂ ಲೋಕಾಯುಕ್ತ ಯಾಕೆಸುಮ್ಮನೇ ಇದೆ? ಎಂದರು.

ಇನ್ನು ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಇದು ಹಳೆಯ ಕೇಸ್ ಅಲ್ಲ, ಹಾಲಿ ಪ್ರಕರಣ. ನಾವೇನೋ ಸೃಷ್ಟಿ ಮಾಡಿ ಹುಡುಕಾಡಿ ದಾಖಲೆ ಮಾಡಿಲ್ಲ. ಯಡಿಯೂರಪ್ಪಗೆ ಹೈಕೋರ್ಟ್ 25 ಸಾವಿರ ರೂಪಾಯಿ ದಂಡ ವಿಧಿಸಿದೆ. ನಿಮ್ಮ ಬಾಮೈದಗೆ ಹೇಗೆ ಜಮೀನು ಸಿಕ್ತು ಅದಕ್ಕೆ ಕುಮಾರಸ್ವಾಮಿ ಉತ್ತರ ನೀಡಬೇಕು. 60 ಲಕ್ಷಕ್ಕೆ ಹೇಗೆ ಕುಮಾರಸ್ವಾಮಿ ಅತ್ತೆ ಜಮೀನು ಖರೀದಿ ಮಾಡಿದ್ರಿ? ಜಮೀನು ನಿಮ್ಮ ಬಾಮೈದನ ಹೆಸರಲ್ಲಿ ಇದೆ ಹೇಗೆ? ಎಂದು ಪ್ರಶ್ನಿಸಿದರು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!