ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಗ್ನೇಯ ಏಷ್ಯಾ ದೇಶಗಳಲ್ಲಿ ಸೈಬರ್ಕ್ರೈಂ ಕೇಂದ್ರದಲ್ಲಿ ಕೆಲಸಕ್ಕಾಗಿ ಇರಿಸಿಕೊಂಡಿದ್ದ 266ಕ್ಕೂ ಹೆಚ್ಚು ಭಾರತೀಯರನ್ನು ಬಿಡುಗಡೆಗೊಳಿಸಿ ಭಾರತಕ್ಕೆ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈ ಕುರಿತು ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿರುವ ಸಚಿವಾಲಯದ ವಕ್ತಾರ ರಣ್ಧೀರ್ ಜೈಸ್ವಾಲ್, ‘ಐಎಎಫ್ ವಿಮಾನದಲ್ಲಿ 266 ಭಾರತೀಯರನ್ನು ಕೇಂದ್ರ ಸರ್ಕಾರ ಸುರಕ್ಷಿತವಾಗಿ ಕರೆತಂದಿದೆ. ಇವರನ್ನೆಲ್ಲಾ ಆಗ್ನೇಯ ಏಷ್ಯಾ ದೇಶಗಳಲ್ಲಿನ ಸೈಬರ್ ಕ್ರೈಂ ಕೇಂದ್ರಗಳಿಂದ ಬಿಡುಗಡೆ ಮಾಡಲಾಗಿದೆ.
ಸೋಮವಾರ ಕೂಡ ಇದೇ ರೀತಿ 283 ಭಾರತೀಯರನ್ನು ಕರೆತರಲಾಗಿತ್ತು. ಮಯಾನ್ಮಾರ್ ಮತ್ತು ಥೈಲ್ಯಾಂಡ್ ಸರ್ಕಾರದ ಜೊತೆಗೆ ಭಾರತದ ರಾಯಭಾರ ಕಚೇರಿಗಳು ಭಾರತೀಯರ ಸುರಕ್ಷಿತ ಬಿಡುಗಡೆ ಹಾಗೂ ಅವರನ್ನು ಸ್ವದೇಶಕ್ಕೆ ಕರೆತರುವ ಕುರಿತು ಕೆಲಸ ಮಾಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಮಾರ್ಚ್ 10ರಂದು ಕೂಡ ಮಯಾನ್ಮಾರ್ ಸೇರಿದಂತೆ ಆಗ್ನೇಯ ಏಷ್ಯಾ ದೇಶಗಳಲ್ಲಿ ನಕಲಿ ಉದ್ಯೋಗದ ಆಮಿಷವೊಡ್ಡಿ ಕರೆದೊಯ್ದಿರುವ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಿ, ಕರೆತರುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದಿತ್ತು.
ಈ ರೀತಿಯ ಉದ್ಯೋಗ ವಂಚನೆ ಪ್ರಕರಣದ ಬಗ್ಗೆ ಜನರ ಎಚ್ಚರಿಕೆ ವಹಿಸುವಂತೆ ಸರ್ಕಾರ ತಿಳಿಸಿದೆ. ವಿದೇಶದಲ್ಲಿ ಉದ್ಯೋಗಕ್ಕೆ ಹೋಗುವ ಮುನ್ನ ನೇಮಕಾತಿ ಏಜೆಂಟ್ ಮತ್ತು ಕಂಪನಿಗಳ ಕುರಿತು ಪೂರ್ವ ಪರಿಶೀಲನೆ ನಡೆಸುವುದು ಅಗತ್ಯ ಎಂದು ಸಲಹೆ ನೀಡಿದೆ.