ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಿಂದ ಅನೇಕರು ಗಡಿ ದಾಟಿ ಭಾರತದತ್ತ ಬರುತ್ತಿದ್ದಾರೆ. ಇಂತಹ ಒಂದು ಘಟನೆಯಲ್ಲಿ ಹಿಂದು ಸಮುದಾಯಕ್ಕೆ ಸೇರಿದ 10 ಬಾಂಗ್ಲಾ ಪ್ರಜೆಗಳನ್ನು ಅಗರ್ತಲಾದಲ್ಲಿ ತ್ರಿಪುರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರು ವಶಕ್ಕೆ ಪಡೆದುಕೊಂಡಿರುವ 10 ಬಾಂಗ್ಲಾ ಪ್ರಜೆಗಳಲ್ಲಿ ಇಬ್ಬರು ಮಹಿಳೆಯರು, ಮೂವರು ಹದಿಹರೆಯದವರು ಹಾಗೂ ಒಬ್ಬರು ಹಿರಿಯ ವ್ಯಕ್ತಿ ಸೇರಿದ್ದಾರೆ ಎಂದು ತ್ರಿಪುರ ಪೊಲೀಸರು ಮಾಹಿತಿ ನೀಡಿದ್ದಾರೆ.
ಇವರನ್ನು ತ್ರಿಪುರಾದ ಅಂಬಸ್ಸಾ ರೈಲು ನಿಲ್ದಾಣದಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಇವರು, ಅಸ್ಸಾಂನ ಸಿಲ್ಚಾರ್ ಗೆ ಹೋಗುವ ರೈಲನ್ನು ಹತ್ತುವ ಸಿದ್ಧತೆಯಲ್ಲಿದ್ದಾಗ ಪೊಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಾಂಗ್ಲಾ ನಾಗರಿಕರ ಮೇಲೆ ಕಾನೂನು ಕ್ರಮಗಳನ್ನು ಜಾರಿ ಮಾಡಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪೊಲೀಸರ ವಶದಲ್ಲಿರುವ ಬಾಂಗ್ಲಾ ನಾಗರಿಕರ ಪೈಕಿ ಸಂಕರ್ ಚಂದ್ರ ಸರ್ಕಾರ್ ಹೇಳುವಂತೆ ಇವರೆಲ್ಲ ಬಾಂಗ್ಲಾದ ಕಿಶೋರ್ ಗಂಜ್‌ನ ಧನ್‌ಪುರ ಗ್ರಾಮದಿಂದ ತಪ್ಪಿಸಿಕೊಂಡು ಬಂದಿರುವುದಾಗಿ ಹೇಳಿದ್ದಾರೆ ಮತ್ತು ಅಲ್ಲಿ ತಮಗೆ ನಿರಂತರ ಬೆದರಿಕೆ ಬರುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.
ಕಾಡು ಗುಡ್ಡಗಳ ಮೂಲಕ ಅಲೆದಾಡಿ, ತ್ರಿಪುರಾದ ಧಲಾಯಿ ಜಿಲ್ಲೆಯ ಕಮಲಾಪುರ ಮೂಲಕ ನಾವು ಶನಿವಾರ ಭಾರತದೊಳಕ್ಕೆ ಬಂದಿದ್ದೇವೆ. ಇಲ್ಲಿಂದ ನಾವು ಅಸ್ಸಾಂನ ಸಿಲ್ಚಾರ್‌ಗೆ ಹೋಗಿ ಅಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವ ಉದ್ದೇಶ ನಮಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ನಾವು ಯಾವುದೇ ಸನ್ನಿವೇಶದಲ್ಲಿ ಬಾಂಗ್ಲಾದೇಶಕ್ಕೆ ಮರಳುವುದಿಲ್ಲ. ಅಲ್ಲಿನ ಪರಿಸ್ಥಿತಿ ತೀರಾ ಕೆಟ್ಟದಾಗಿದೆ. ಹಿಂದೂಗಳ ಮೆಲೆ ಮತ್ತು ಅವರ ಆಸ್ತಿಪಾಸ್ತಿಗಳ ಮೇಲೆ ದಾಳಿ ಮಾಡುವುದು ಅಲ್ಲಿ ಪ್ರತಿ ನಿತ್ಯ ನಡೆಯುತ್ತಿದೆ ಎಂದು ಸರ್ಕಾರ್ ಹೇಳಿಕೊಂಡಿದ್ದಾರೆ.
ಶೇಖ್ ಹಸಿನಾ ಅವರ ಅವಾಮಿ ಲೀಗ್ ಸರಕಾರದ ಆಡಳಿತದಲ್ಲಿ ನಾವೆಲ್ಲರೂ ಸಂತೋಷವಾಗಿದ್ದೆವು ಮತ್ತು ನಾವು ವಾಸವಿದ್ದ ಪ್ರದೇಶದಲ್ಲಿ ಹಿಂದುಮತ್ತು ಮುಸ್ಲಿಂರ ನಡುವೆ ಯಾವುದೇ ಘರ್ಷಣೆಗಳಿರಲಿಲ್ಲ. ಆದರೆ ಮಹಮ್ಮದ್ ಯೂನುಸ್ ಅವರ ನೇತೃತ್ವದಲ್ಲಿ ಹಂಗಾಮಿ ಸರಕಾರ ರಚನೆಯಾದ ಬಳಿಕ, ನಮ್ಮನ್ನು ನಿರಂತರವಾಗಿ ಹಿಂಸಿಸಲಾಯಿತು ಮತ್ತು ಬೆದರಿಕೆಯೊಡ್ಡಲಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.
ಕಳೆದ ನಾಲ್ಕು ತಿಂಗಳಲ್ಲಿ 550 ಬಾಂಗ್ಲಾದೇಶಿ ಪ್ರಜೆಗಳು ತ್ತು 63 ರೊಹಿಂಗ್ಯಾ ನಿರಾಶ್ರಿತರು ಸರ್ಕಾರಿ ರೈಲ್ವೆ ಪೊಲೀಸರು, ಗಡಿ ಭದ್ರತಾ ಪಡೆಗಳು ಮತ್ತು ತ್ರಿಪುರಾ ಪೊಲಿಸರು ಅಗರ್ತಲಾ ರೈಲ್ವೇ ನಿಲ್ದಾಣ ಹಾಗೂ ತ್ರಿಪುರಾದ ವಿವಿಧ ಪ್ರದೇಶಗಳಿಂದ ಭಾರತಕ್ಕೆ ಕಾನೂನುಬಾಹಿರವಾಗಿ ಒಳಪ್ರವೇಶಿಸಿದ್ದು, ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಇನ್ನು ಜೂನ್-ಜುಲೈನಲ್ಲಿ ಬಾಂಗ್ಲಾದಲ್ಲಿ ಉದ್ವಿಗ್ನತೆ ಪ್ರಾರಂಭಗೊಂಡ ಬಳಿಕ, ಭಾರತ-ಬಾಂಗ್ಲಾದ 4,096 ಕಿ.ಮೀ. ಗಡಿಭಾಗದಲ್ಲಿ ಗಸ್ತು ಹೆಚ್ಚಿಸಲಾಗಿದೆ.