ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ: ಇಷ್ಟು ದಿನ ಆಡಿಯೋ ಸಾಕ್ಷ್ಯ ಯಾಕೆ ಬಿಡುಗಡೆ ಮಾಡಲಿಲ್ಲ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಿಎಸ್​ಐ ನೇಮಕಾತಿ ಪರೀಕ್ಷೆ ಅಕ್ರಮ ಸಂಬಂಧ ಸಿಐಡಿ ಪೊಲೀಸರು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಅಪ್ತರೆನ್ನಲಾದ ನಾಯಕರನ್ನು ಬಂಧಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಶನಿವಾರ ಪ್ರಿಯಾಂಕ್​ ಖರ್ಗೆ ಬಿಡುಗಡೆ ಮಾಡಿದ ಆಡಿಯೋ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿದ ಗೃಹ ಸಚಿವರು, ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಹುದ್ದೆಯಿಂದ ವಂಚಿತರಾಗಬಾರದು.. ಅಂತಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಸಿಐಡಿ ತನಿಖೆಗೆ ನಾನೇ ಸ್ವತಃ ಆಸಕ್ತಿ ತೋರಿಸಿದ್ದೆ ಎಂದರು.
ಮುಖ್ಯಮಂತ್ರಿಗಳ ಜೊತೆಗೂ ಸಮಾಲೋಚಿಸಿ ನಾನು ತನಿಖೆಗೆ ಆದೇಶ ನೀಡಿದ್ದೆ. ಆ ನಂತರ ಪ್ರಿಯಾಂಕ್​ ಖರ್ಗೆ ಕೂಡ ಸುದ್ದಿಗೋಷ್ಠಿ ನಡೆಸಿದ್ದರು. ಆದರೆ, ಆಗ ಆಡಿಯೋ ರೆಕಾರ್ಡ್ ಬಗ್ಗೆ ಮಾಹಿತಿ ನೀಡಿರಲಿಲ್ಲ. ಇಷ್ಟು ದಿನ ಯಾಕೆ ಸಾಕ್ಷ್ಯವನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು? ಎಂದು ಸಚಿವರು ಮರು ಪ್ರಶ್ನಿಸಿದ್ದಾರೆ.
ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿದೆ. ಅಕ್ರಮದಲ್ಲಿ ಭಾಗಿಯಾದವರು ಎಷ್ಟೇ ದೊಡ್ಡವರಾದರೂ ರಕ್ಷಿಸುವ ಪ್ರಶ್ನೆಯಿಲ್ಲ. ಕಾಂಗ್ರೆಸ್ ನಾಯಕರು ತನಿಖೆಗೆ ಸಹಕರಿಸಬೇಕು ಹಾಗೂ ಯಾವುದೇ ರೀತಿಯ ರಾಜಕೀಯ ಲಾಭ ಅಪೇಕ್ಷೆ ಮಾಡದೆ, ಅಕ್ರಮ ಎಸಗಿದವರನ್ನು ಕಾನೂನಿನ ಬಲೆಗೆ ತರಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!