ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ವಾಹನವನ್ನು ಮಾಲು ಸಹಿತ ವಶಕ್ಕೆ ಪಡೆದು ಓರ್ವನನ್ನು ಬಂಧಿಸಿದ ಘಟನೆ ಜೋಯಿಡಾ ತಾಲ್ಲೂಕಿನ ಅನಮೋಡ ಅಬಕಾರಿ ತನಿಖಾ ಠಾಣೆಯ ಮುಂಭಾಗ ಇಂದು ನಸುಕಿನ ವೇಳೆಯಲ್ಲಿ ನಡೆದಿದೆ.
ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡಿಕೊಂಡು ಬರುತ್ತಿದ್ದ ವಾಹನವನ್ನು ಖಚಿತ ಮಾಹಿತಿಯನ್ನಾಧರಿಸಿ ಅನಮೋಡ ಅಬಕಾರಿ ತನಿಖಾ ಠಾಣೆಯ ಹತ್ತಿರ ಪರಿಶೀಲನೆ ನಡೆಸಿದಾಗ ಅಕ್ರಮ ಮದ್ಯ ಸಾಗಾಟ ಬೆಳಕಿಗೆ ಬಂದಿದೆ. ಈ ಸಂದರ್ಭದಲ್ಲಿ ವಾಹನದಲ್ಲಿದ್ದ ಅಕ್ರಮ ಗೋವಾ ಮದ್ಯ ಹಾಗೂ ವಾಹನವನ್ನು ವಶಪಡಿಸಿಕೊಂಡು, ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಜೋಯಿಡಾ ತಾಲ್ಲೂಕಿನ ಪಣಸೋಲಿ ಗ್ರಾಮದ ನಿವಾಸಿ ವಿಜಯ್ ಗೋವಿಂದ ಚಿನ್ನನವರ್ ಎಂಬಾತನನ್ನು ದಸ್ತಗಿರಿ ಮಾಡಲಾಗಿದೆ.
ವಾಹನದ ಮಾಲಕನನ್ನು ಪತ್ತೆ ಹಚ್ಚುವ ಕಾರ್ಯವನ್ನು ಮುಂದುವರಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಅಬಕಾರಿ ಜಿಲ್ಲಾ ಉಪ ಆಯುಕ್ತರಾದ ವಿನೋದ್ ಕುಮಾರ್ ಮತ್ತು ಅಬಕಾರಿ ಉಪಾಧೀಕ್ಷಕರಾದ ಶಂಕರಗೌಡ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ನಿರೀಕ್ಷಕರಾದ ಟಿ.ಬಿ.ಮಲ್ಲಣ್ಣನವರ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಿಬ್ಬಂದಿಗಳಾದ ಎಸ್.ಬಿ.ಬನ್ಸೋಡೆ, ಮೋಹನ್.ಕೆ.ಮೊಗೇರ್ ಮತ್ತು ಸದಾಶಿವ ರಾಥೋಡ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.