ಅಕ್ರಮ ಹಣ ವರ್ಗಾವಣೆ: ದೇಶದಾದ್ಯಂತ SDPI ಕಚೇರಿಗಳ ಮೇಲೆ ED ದಾಳಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:
 
ಅಕ್ರಮ ಹಣ ವರ್ಗಾವಣೆ ಕೇಸಲ್ಲಿ ಜಾರಿ ನಿರ್ದೇಶಾನಲಯದ ಅಧಿಕಾರಿಗಳು ಪಿಎಫ್‌ಐನ ರಾಜಕೀಯ ಮುಖವಾಣಿ ಸಂಘಟನೆ ಎಸ್‌ಡಿಪಿಐನ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಜಿಯನ್ನು ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ರಾತ್ರಿ ಬಂಧಿಸಿದ್ದು, ಇದರ ಬೆನ್ನಲ್ಲೇ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ಗೆ ಸಂಬಂಧಿಸಿದ ಪ್ರಧಾನ ಕಚೇರಿ ಸೇರಿ ಹಲವು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.

ದೆಹಲಿಯಲ್ಲಿರುವ ಎಸ್‌ಡಿಪಿಐ ಪ್ರಧಾನ ಕಚೇರಿ, ಕೇರಳದ ತಿರುವನಂತಪುರಂ ಮತ್ತು ಮಲಪ್ಪುರಂ, ಬೆಂಗಳೂರು, ಆಂಧ್ರಪ್ರದೇಶದ ನಂದ್ಯಾಲ್, ಥಾಣೆ, ಚೆನ್ನೈ, ಜಾರ್ಖಂಡ್‌ನ ಪಾಕೂರ್, ಕೋಲ್ಕತ್ತಾ, ಲಕ್ನೋ ಮತ್ತು ಜೈಪುರ ಸೇರಿದಂತೆ 12 ಸ್ಥಳಗಳಲ್ಲಿ ಇಡಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದೆ.

ಎಸ್‌ಡಿಪಿಐಯು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ಅಂಗವಾಗಿದೆ. ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದನ್ನು ಉಲ್ಲೇಖಿಸಿ, 2022ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಪಿಎಫ್‌ಐ ಅನ್ನು ಕಾನೂನುಬಾಹಿರ ಸಂಘವೆಂದು ಘೋಷಿಸಿತ್ತು.

ಪಿಎಫ್‌ಐ ನಿಷೇಧದ ಬಳಿಕ 2009ರಲ್ಲಿ ಸ್ಥಾಪನೆಯಾದ ಮತ್ತು ದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಎಸ್‌ಡಿಪಿಐ ಮೂಲಕ ಪಿಎಫ್‌ಐ ತನ್ನ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಇಡಿ ಆರೋಪಿಸಿದೆ. ಇದಕ್ಕೆ ಪೂರಕ ಎನ್ನುವಂತೆ ಪಿಎಫ್‌ಐ ಬ್ಯಾಂಕ್ ಖಾತೆಗಳಿಂದ ಎಸ್‌ಡಿಪಿಐಗೆ ಭಾರೀ ಪ್ರಮಾಣದ ಹಣ ವರ್ಗಾವಣೆಯಾಗಿರುವುದು ಕಂಡುಬಂದಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ಮಾಡಲು ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಜಿ ಅವರನ್ನು ಮಾ. 3ರಂದು ಬಂಧಿಸಿರುವ ಇಡಿ ಅಧಿಕಾರಿಗಳು ಎಸ್‌ಡಿಪಿಐ ಮತ್ತು ನಿಷೇಧಿತ ಪಿಎಫ್‌ಐ ನಡುವಿನ ಆರ್ಥಿಕ ವ್ಯವಹಾರಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!