ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನ್‌ಲೈನ್ ಬೆಟ್ಟಿಂಗ್ (ಜೂಜು) ಗೆ ಸಂಬಂಧಿಸಿದ ಅಕ್ರಮ ಹಣವರ್ಗಾವಣೆಯ ಕುರಿತಾದ ತನಿಖಾ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯವು ಇದುವರೆಗೆ 212 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಹೇಳಿದ್ದಾರೆ. ” ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಿನ ಸೈಟ್‌ಗಳು ಮತ್ತು ಆ್ಯಪ್‌ಗಳನ್ನು ಮನಿ ಲಾಂಡರಿಂಗ್ ಮತ್ತು ಹವಾಲಾ ವಹಿವಾಟುಗಳಿಗೆ ಬಳಸುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ 212.91 ಕೋಟಿ ಮೊತ್ತದ ಪಿಒಸಿ (ಅಪರಾಧದ ಆದಾಯ)ವನ್ನು ಪಿಎಂಎಲ್‌ಎ ನಿಬಂಧನೆಗಳ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ” ಎಂದು ಸಚಿವರು ಸಂಸತ್ತಿಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಅಲ್ಲದೆ, ಅಕ್ರಮ ಹಣವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಡಿ ಮೂರು ಪ್ರಾಸಿಕ್ಯೂಷನ್ ದೂರುಗಳನ್ನು ಸಹ ದಾಖಲಿಸಿದೆ. ಆನ್‌ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ಅಪ್ಲಿಕೇಶನ್‌ಗಳನ್ನು ಕಾನೂನುಬದ್ಧಗೊಳಿಸುವಂತಹ ಯಾವುದೇ ಪ್ರಸ್ತಾಪವು ಸರ್ಕಾರದ ಮುಂದೆ ಪರಿಗಣನೆಯಲ್ಲಿಲ್ಲ. ಇದಲ್ಲದೆ, ದೇಶದಲ್ಲಿ ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟದಲ್ಲಿ ತೊಡಗಿರುವ ಹಣದ ಬಗ್ಗೆ ಕೇಂದ್ರವು ಇದುವರೆಗೆ ಯಾವುದೇ ಸಮೀಕ್ಷೆಯನ್ನು ನಡೆಸಿಲ್ಲ. ಆದರೆ ಆನ್‌ಲೈನ್ ಗೇಮಿಂಗ್ ಜಾಲವನ್ನು ನಿಯಂತ್ರಿಸಲು ಸರ್ಕಾರವು ನೀತಿ ಚೌಕಟ್ಟನ್ನು ರೂಪಿಸುತ್ತಿದೆ. ಸರ್ಕಾರವು ಎಲ್ಲಾ ಮಧ್ಯಸ್ಥಗಾರರೊಂದಿಗೆ ಅತ್ಯಂತ ಗಂಭೀರವಾದ ಸಮಾಲೋಚನೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಮತ್ತು ಶೀಘ್ರದಲ್ಲೇ ಸರಿಯಾದ ನೀತಿಯನ್ನು ತರಲಿದೆ ಎಂದು ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.
ದೇಶಾದ್ಯಂತ ಜೂಜಾಟವನ್ನು ನಿಷೇಧಿಸಲಾಗಿದ್ದರೂ ಅನೇಕ ಆನ್‌ಲೈನ್ ಫ್ಲಾಟ್‌ಫಾರ್ಮ್ ಗಳು ಜನರಿಗೆ ಹೆಚ್ಚಿನ ಆದಾಯದ ಆಮಿಷವೊಡ್ಡಿ ಅವರನ್ನು ಬಲೆಗೆ ಬೀಳಿಸುತ್ತಿವೆ. ಅನೇಕ ವಂಚನೆಯ ಪ್ರಕರಣಗಳು ಬೆಳಕಿಗೆ ಬಂದಿರುವುದರಿಂದ ಅವುಗಳಿಗೆ ಕಡಿವಾಣ ಹಾಕಲು ಸರ್ಕಾರ ಶೀಘ್ರದಲ್ಲೇ ನೀತಿ ಚೌಕಟ್ಟು ರೂಪಿಸಲಿದೆ ಎಂದು ಸಚಿವರು ಹೇಳಿದ್ದಾರೆ.