ಪಿಎಸ್​​ಐ ನೇಮಕಾತಿಯಲ್ಲಿ ಅಕ್ರಮ | ಅಭ್ಯರ್ಥಿಗಳಿಗೆ ಮರುಪರೀಕ್ಷೆ: ಸಚಿವ ಅರಗ ಜ್ಞಾನೇಂದ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಿಎಸ್​​ಐ ನೇಮಕಾತಿಯಲ್ಲಿ ಅಕ್ರಮ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ಹಿಂದೆ ನಡೆದಿದ್ದ ಪರೀಕ್ಷೆಯನ್ನು ರದ್ದುಪಡಿಸಿ ಹೊಸದಾಗಿ ಪರೀಕ್ಷೆ ನಡೆಸಲು ಸರ್ಕಾರ ತೀರ್ಮಾನಿಸಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ವಿಕಾಸಸೌಧದಲ್ಲಿ ಇಂದು ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಒಂದಕ್ಕಿಂತ ಹೆಚ್ಚು ಸೆಂಟರ್​​ನಲ್ಲಿ ಅವ್ಯವಹಾರ ಮನದಟ್ಟಾಗಿದೆ. ಹಾಗಾಗಿ, ಇಡೀ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ. ಹೊಸದಾಗಿ ಪರೀಕ್ಷೆ ನಡೆಯಲಿದೆ.
ಒಟ್ಟು 54,289 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅಪಾಧಿತರನ್ನು ಹೊರತುಪಡಿಸಿ, ಎಲ್ಲರಿಗೂ ಮರು ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಶೀಘ್ರದಲ್ಲೇ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು.
ಹಣಕ್ಕಾಗಿ ಹುದ್ದೆಗಳು ಎನ್ನುವುದನ್ನು ಬಿಡಬೇಕು. ಅನೇಕ ಪರೀಕ್ಷೆಗಳಲ್ಲಿ ಇಂತಹದ್ದು ಆಗಿದೆ. ಇನ್ನಷ್ಟು ಕಠಿಣ ನಿಯಮ ತರಬೇಕಿದೆ. ಕಠಿಣ ಪರಿಶ್ರಮ ಹಾಕಿದವರು ಅವಕಾಶ ವಂಚಿತರಾಗುತ್ತಿದ್ದಾರೆ. ಹಣ ಹಾಗೂ ಅಕ್ರಮ ಎಸಗುವವರು ಸೆಲೆಕ್ಟ್ ಆಗುತ್ತಿದ್ದಾರೆ. ಇದಕ್ಕೆ‌ ಬ್ರೇಕ್ ಹಾಕಲು ಕಠಿಣ ನಿಯಮ ರೂಪಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಗೃಹ ಸಚಿವರು ಹೇಳಿದರು.
ಪಿಎಸ್​ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿ ದಿವ್ಯಾ ಹಾಗರಗಿ, ಅರ್ಚನಾ ದಿವ್ಯಾ, ಚಾಲಕ ಸದ್ದಾಂ, ಸುನಂದಾ ಅವರನ್ನು ಪುಣೆಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಹೊಸ ಟೆಕ್ನಾಲಜಿಯಿಂದ ಅಕ್ರಮ ಎಸಗಿದ್ದಾರೆ. ಇದರ ಬಗ್ಗೆ ಸಮಗ್ರ ತನಿಖೆಯಾಗಲಿದೆ. ಇದನ್ನು ಹೇಗೆ ನಿರ್ಬಂಧಿಸಬಹುದು ಎಂಬುದರ ಬಗ್ಗೆ ನೋಡುತ್ತಿದ್ದೇವೆ. ಯಾರೇ ತಪ್ಪಿತಸ್ಥರಿದ್ದರೂ ಕ್ರಮವಾಗಲಿದೆ. ಇದರಲ್ಲಿ ಅಧಿಕಾರಿಗಳು ಇದ್ದರೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!