ಹೊಸದಿಗಂತ ವರದಿ ಬೆಂಗಳೂರು:
ಅಕ್ರಮವಾಗಿ ಇ-ಸಿಗರೇಟ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಮಾದಕ ವಸ್ತು ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ₹ 3 ಕೋಟಿಗೂ ಅಧಿಕ ಮೌಲ್ಯದ ನಿಷೇಧಿತ ಇ-ಸಿಗರೇಟ್ ವಶಕ್ಕೆಪಡೆಯಲಾಗಿದೆ.
ಕೇರಳ ಮೂಲದ ಶೋಯೇಬ್ ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಸದ್ಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿ ಬಿಟಿಎಂನಲ್ಲಿರುವ ಆರೋಪಿಯ ಮನೆಯ ಮೇಲೆ ದಾಳಿ ನಡೆಸಿದ್ದಾರೆ.
ಆರೋಪಿ ಶೋಯೆಬ್ ದುಬಾಯಿ, ದಿಲ್ಲಿ ಮುಂತಾದ ಕಡೆಯಿಂದ ಬ್ಲೂ ಡಾರ್ಟ್ ಮುಖಾಂತರ ಬೆಂಗಳೂರಿಗೆ ಕೊರೀಯರ್ ತರಿಸಿಕೊಳ್ಳುತ್ತಿದ್ದ. ಮಾರಾಟಕ್ಕೆಂದು ಒಟ್ಟು 6 ಸಾವಿರ ಇ-ಸಿಗರೇಟ್ ತರಿಸಿಕೊಂಡಿದ್ದ. ಡನ್ಜೋ ಮುಖಾಂತರ ಗಿರಾಕಿಗಳಿಗೆ ಡೆಲೇವರಿ ಮಾಡುತ್ತಿದ್ದ ಎಂಬುದು ವಿಚಾರಣೆ ವೇಳೆ ತಿಳಿಬಂದಿದೆ.
ಸದ್ಯ ಎಸ್.ಜಿ ಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.