ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಉಡುಪಿ ಜಿಲ್ಲೆಯ ಪಡುಬಿದ್ರಿ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಹಾಲಿ ಗ್ರಾಮ ಪಂಚಾಯತ್ ಸದಸ್ಯ ಪರಾರಿಯಾದ ಘಟನೆಯು ಗುರುವಾರ ಸಂಜೆ ಉಚ್ಚಿಲದಲ್ಲಿ ನಡೆದಿದೆ.
ಉಚ್ಚಿಲ ಭಾಸ್ಕರ ನಗರ ಜುಮ್ಮಾ ಮಸೀದಿ ಬಳಿಯ ಮನೆಯೊಂದರಲ್ಲಿ ನಡೆಯುತ್ತಿದ್ದ ಕಸಾಯಿಖಾನೆಗೆ ದಾಳಿ ನಡೆಸಿದ ಪಡುಬಿದ್ರಿ ಪೊಲೀಸರು ಆರೋಪಿಗಳಾದ ಮಹಮ್ಮದ್ ರಫೀಕ್, ಇಲಿಯಾಸ್, ಮಹಮ್ಮದ್ ಮೊಹಿದ್ದೀನ್, ಮೊಯ್ದಿನಬ್ಬ ಎಂಬವರನ್ನು ಬಂಧಿಸಿರುತ್ತಾರೆ.
ಈ ನಾಲ್ವರು ಆರೋಪಿಗಳೊಂದಿಗೆ ಒಂದು ಜೀವಂತ ಹಸು, ಮಾಂಸಕ್ಕೆ ಕಡಿಯಲಾದ ಹಸು ಹಾಗೂ ದನ ಕಡಿದು ಮಾರಾಟಕ್ಕೆ ಸಿದ್ಧಪಡಿಸಲಾಗಿದ್ದ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.ಉಚ್ಚಿಲ ಭಾಸ್ಕರ ನಗರದಲ್ಲಿ ಸಾಬನ್ ಎಂಬಾತನ ಮನೆಯಲ್ಲಿ ಈ ಕಸಾಯಿಖಾನೆ ಇದ್ದು, ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು, ಈ ಸಂದರ್ಭ ಪ್ರಮುಖ ಆರೋಪಿ ಉಚ್ಚಿಲ ಬಡಾಗ್ರಾಮ ಪಂಚಾಯತ್ ಸದಸ್ಯ ಎನ್ನಲಾಗುತ್ತಿರುವ ಮಹಮ್ಮದ್ ದಿವು ರಫೀಕ್ ಎಂಬಾತ ಪರಾರಿಯಾಗಿದ್ದಾನೆ.
ಕಾರ್ಯಾಚರಣೆಯಲ್ಲಿ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಪ್ರಕಾಶ್, ಪಡುಬಿದ್ರಿ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ ಪುರುಷೋತ್ತಮ ಹಾಗೂ ಪಡುಬಿದ್ರಿ ಪೊಲೀಸರು ಪಾಲ್ಗೊಂಡಿರುತ್ತಾರೆ.