ನಾನು ಒಬ್ಬ ಮನುಷ್ಯ…ದೇವರಲ್ಲ: ಪಾಡ್‌ಕಾಸ್ಟ್‌ನಲ್ಲಿ ಪ್ರಧಾನಿ ಮೋದಿ ಮಾತು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಝೆರೋದಾ ಸಹ ಸಂಸ್ಥಾಪಕ (Co-founder of Zeroda) ನಿಖಿಲ್‌ ಕಾಮತ್‌ (Nikhil Kamath) ಅವರೊಂದಿಗೆ ಪೀಪಲ್ ವಿಥ್ ದಿ ಪ್ರೈಮ್ ಮಿನಿಸ್ಟರ್ (People with the Prime Minister) ಎಂಬ ಪಾಡ್‌ಕಾಸ್ಟ್ ನಲ್ಲಿ ಪ್ರಧಾನಿ ಮೋದಿ ಅವರು ರಾಜಕೀಯ ಮಾತ್ರವಲ್ಲದೆ ಖಾಸಗಿ ವಿಷಯಗಳು, ಕುಟುಂಬಸ್ಥರು, ಗೆಳೆಯರು ಹೀಗೆ ಹಲವಾರು ವಿಷಯಗಳನ್ನು ಮೆಲುಕು ಹಾಕಿದ್ದಾರೆ.

ಎರಡು ಗಂಟೆಗಳ ಕಾಲ ನಡೆದ ಮಾತುಕತೆಯಲ್ಲಿ ಪ್ರಧಾನಿ ಮೋದಿ ತಮ್ಮ ಆರಂಭಿಕ ವರ್ಷಗಳು, ಶಿಕ್ಷಣ, ರಾಜಕೀಯ ಸ್ಪರ್ಧೆ, ಒತ್ತಡವನ್ನು ನಿಭಾಯಿಸುವುದು ಹೇಗೆ, ರಾಜಕೀಯದಲ್ಲಾದ ಹಿನ್ನಡೆಗಳು ಸೇರಿದಂತೆ ತಮ್ಮ ಜೀವನದ ವಿವಿಧ ಅಂಶಗಳನ್ನು ಹಂಚಿಕೊಂಡಿದ್ದಾರೆ.

ಇದು ನನ್ನ ಮೊದಲ ಪಾಡ್‌ಕ್ಯಾಸ್ಟ್. ಈ ಜಗತ್ತು ನನಗೆ ಸಂಪೂರ್ಣವಾಗಿ ಹೊಸದು ಎಂದು ಯುವ ಬಿಲಿಯನೇರ್ ನಿಖಿಲ್ ಕಾಮತ್ ಜೊತೆಗಿನ ಸಂಭಾಷಣೆಯ ಆರಂಭದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ನಿಖಿಲ್ ಕಾಮತ್, ನೀವು ಹಿಂದಿ ಭಾಷೆಯಲ್ಲಿ ಬಹಳ ಪ್ರಬುದ್ಧತೆ ಹೊಂದಿದ್ದೀರಿ. ಆದರೆ, ನನ್ನ ಹಿಂದಿ ಭಾಷೆಯ ಬಳಕೆಯಲ್ಲಿ ತಪ್ಪಾದರೆ ಕ್ಷಮಿಸಿ. ಏಕೆಂದರೆ, ನನ್ನ ಮಾತೃಭಾಷೆ ಹಿಂದಿ ಅಲ್ಲ. ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ನನ್ನ ತಾಯಿ ಮೈಸೂರಿನವರು, ನನ್ನ ತಂದೆ ಮಂಗಳೂರಿನವರು. ಮನೆಯಲ್ಲಿ ಮಾತನಾಡುವ ಭಾಷೆ ಕನ್ನಡ. ಹೀಗಾಗಿ, ಹಿಂದಿಯಲ್ಲಿ ಶಾಲೆಯಲ್ಲಿ ಮಾತ್ರ ಕಲಿತವನು ನಾನು. ಆದ್ದರಿಂದ ಸರಿಯಾಗಿ ಹಿಂದಿ ಮಾತನಾಡದಿದ್ದರೆ ಕ್ಷಮಿಸಿ ಎಂದಿದ್ದಾರೆ.ಅದಕ್ಕೆ ಪ್ರತಿಕ್ರಿಯಿಸಿದ ಮೋದಿ, ತೊಂದರೆಯಿಲ್ಲ ಮ್ಯಾನೇಜ್‌ ಮಾಡಬಹುದು ಎಂದು ತಿಳಿಸಿದರು.

ರಾಜಕೀಯದ ಕುರಿತಾಗಿ ಕೇಳಿದ ಪ್ರಶ್ನೆಯಲ್ಲಿ, ರಾಜಕೀಯವು ಕೊಳಕು ರಂಗ ಎಂದು ಭಾವಿಸುವವರಿಗೆ ತಮ್ಮ ಸಲಹೆ ಏನು? ಎಂದು ಕೇಳಿದರು. ದಕ್ಷಿಣ ಭಾರತದ ಮಧ್ಯಮ ವರ್ಗದ ಮನೆಯಲ್ಲಿ ಬೆಳೆದ ನಮಗೆ ಯಾವಾಗಲೂ ರಾಜಕೀಯವೆಂದರೆ ಕೊಳಕು ಎಂದು ಹೇಳಲಾಗುತ್ತಿತ್ತು. ಈ ನಂಬಿಕೆ ನಮ್ಮ ಮನಸ್ಸಿನಲ್ಲಿ ಎಷ್ಟು ಬೇರೂರಿದೆ ಎಂದರೆ ಅದನ್ನು ಬದಲಾಯಿಸುವುದು ಅಸಾಧ್ಯ. ಇದೇ ರೀತಿ ಯೋಚಿಸುವ ಜನರಿಗೆ ನಿಮ್ಮ ಒಂದು ಸಲಹೆ ಏನು? ಎಂದು ಕೇಳಿದರು.

ಅದಕ್ಕೆ ಉತ್ತರಿಸಿದ ಪ್ರಧಾನಿ ಮೋದಿ, ನಿಮ್ಮ ಸುತ್ತಲಿನವರು ರಾಜಕೀಯದ ಬಗ್ಗೆ ಹೇಳಿದ್ದನ್ನು ನೀವು ನಂಬಿದ್ದರೆ, ನಾವು ಇಂದು ಈ ಸಂಭಾಷಣೆಯನ್ನು ನಡೆಸುತ್ತಿರಲಿಲ್ಲ ಎಂದಿದ್ದಾರೆ.

ಇದೇ ವೇಳೆ, ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರ ಹಳೆಯ ಭಾಷಣಗಳ ಬಗ್ಗೆ ಕೇಳಿದಾಗ, ಪ್ರಧಾನಿ ಮೋದಿ ‘ನಾನು ಸೂಕ್ಷ್ಮವಲ್ಲದ ರೀತಿಯಲ್ಲಿ ಕೆಲವು ಬಾರಿ ಮಾತನಾಡಿದ್ದೇನೆ. ತಪ್ಪುಗಳು ಸಂಭವಿಸುತ್ತವೆ. ಏಕೆಂದರೆ ನಾನು ಕೂಡ ಮನುಷ್ಯನೇ ವಿನಃ ದೇವರಲ್ಲ’ ಎಂದಿದ್ದಾರೆ.

‘ನಾನು ಮುಖ್ಯಮಂತ್ರಿಯಾದಾಗ ನನ್ನ ಒಂದು ಭಾಷಣದಲ್ಲಿ, ನನ್ನ ಪ್ರಯತ್ನಗಳಲ್ಲಿ ಯಾವುದೇ ಕಲ್ಲನ್ನು ಬಿಡುವುದಿಲ್ಲ ಎಂದು ಹೇಳಿದ್ದೆ. ಎರಡನೆಯದಾಗಿ, ನಾನು ನನಗಾಗಿ ಏನನ್ನೂ ಮಾಡುವುದಿಲ್ಲ ಎಂದಿದ್ದೆ. ಮೂರನೆಯದಾಗಿ ನಾನು ಕೂಡ ಮನುಷ್ಯ, ನಾನು ತಪ್ಪುಗಳನ್ನು ಮಾಡಬಹುದು. ಆದರೆ ನಾನು ಕೆಟ್ಟ ಉದ್ದೇಶದಿಂದ ತಪ್ಪುಗಳನ್ನು ಮಾಡುವುದಿಲ್ಲ ಎಂದಿದ್ದೆ. ನಾನು ಅವುಗಳನ್ನು ನನ್ನ ಜೀವನದ ಮಂತ್ರಗಳನ್ನಾಗಿ ಮಾಡಿಕೊಂಡಿದ್ದೇನೆ. ತಪ್ಪುಗಳನ್ನು ಮಾಡುವುದು ಸಹಜ. ಏಕೆಂದರೆ ಎಲ್ಲರಂತೆ ನಾನು ಒಬ್ಬ ಮನುಷ್ಯ, ನಾನೇನು ದೇವರಲ್ಲ. ಆದರೆ ಉದ್ದೇಶಪೂರ್ವಕವಾಗಿ ತಪ್ಪು ಮಾಡುವುದಿಲ್ಲ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ಈ ಜ್ಞಾನೋದಯ ಐದು ವರ್ಷಗಳ ಹಿಂದೆಯೇ ಆಗಿದ್ದರೆ ದೇಶದ ಅದೆಷ್ಟೋ ವ್ಯವಸ್ಥೆಗಳು ಸರಿದಾರಿಯಲ್ಲಿ ಇರಬಹುದಿತ್ತು , ಬೆಲೆಯೇರಿಕೆ ನಿರುದ್ಯೋಗದಂಥ ಸಮಸ್ಯೆಗಳಲ್ಲಿ ಬಡಹಿಂದೂಗಳ ಬದುಕು ಮೂರಾಬಟ್ಟೆ ಆಗುತ್ತಿರಲಿಲ್ಲ

LEAVE A REPLY

Please enter your comment!
Please enter your name here

error: Content is protected !!