ಹೊಸದಿಗಂತ ವರದಿ,ಹುಬ್ಬಳ್ಳಿ:
ಮಹಾದಾಯಿ ವಿಚಾರದಲ್ಲಿ ಈ ಭಾಗದ ಜನಪ್ರತಿನಿಗಳು ರಾಜಕೀಯ ಮಾಡುವುದನ್ನು ಬಿಟ್ಟು ತಕ್ಷಣ ಯೋಜನೆ ಅನುಷ್ಠಾನಗೊಳಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರೈತ ಸೇನೆ ಎಚ್ಚರಿಕೆ ನೀಡಿದೆ.
ಈ ಕುರಿತು ಪ್ರಕಟಣೆ ನೀಡಿದ್ದು, ೧೯೭೬ ರಿಂದ ಇಲ್ಲಿಯವರೆಗೆ ೪೭ ವರ್ಷಗಳ ಕಾಲ ನಿರಂತರ ಹೋರಾಟ ಮಾಡಿದರು ಸಹ ಯೋಜನೆ ಅನುಷ್ಠಾನವಾಗಿಲ್ಲ. ಪ್ರಜಾ ಪ್ರಭುತ್ವ ವ್ಯವಸ್ಥೆಯ ಸರ್ಕಾರಗಳು ತಲೆ ತಗ್ಗಿಸುವಂತ ವಿಷಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಲಪ್ರಭಾ ನೀರನ್ನು ಸಹ ಹು-ಧಾ ಅವಳಿನಗರಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಕೃಷಿಕರಿಗೆ ಸಹ ನೀರು ದೊರೆಯುತ್ತಿಲ್ಲ. ಕಾನೂನು ತೊಡಕು ನಿವಾಸಿರುವ ಇಚ್ಛಾಶಕ್ತಿ ಇಲ್ಲಿಯ ಜನಪ್ರತಿನಿಗಳಲ್ಲಿ ಕಾಣುತ್ತಿಲ್ಲ.
ಮಹದಾಯಿ ಹೋರಾಟಕ್ಕಾಗಿ ವರ್ಷವಿಡಿ ನಿರಂತರ ಹೋರಾಟ, ಲಾಠಿ ಚಾರ್ಜ ಮುಕದ್ದಮೆಗಳನ್ನು ಅನುಭವಿಸಿ ಯಾವುದೇ ಫಲವಿಲ್ಲದೆ ಕೈಚೆಲ್ಲಿ ಕೂಡುವ ಕಷ್ಟದ ಪರಿಸ್ಥಿತಿಯಲ್ಲಿ ರೈತರಿದ್ದೇವೆ. ಮಲಪ್ರಭಾ ಯೋಜನಾ ವ್ಯಾಪ್ತಿಯಲ್ಲಿ ೯ ತಾಲೂಕಿನ ರೈತರು ನೀರಾವರಿ ಆಶಾಭಾವನೆಯಿಂದ ಸರ್ಕಾರದ ಸಲಹೆಯಂತೆ ಸಾವಿರಾರು ಕೋಟಿ ರೂ. ಸಾಲಮಾಡಿ ಕೃಷಿಗೆ ಹೂಡಿಕೆ ಮಾಡಿದ್ದಾರೆ. ಈ ಯೋಜನೆ ನೀರು ದೊರೆಯದ ಕಾರಣ ರೈತರಿಗೆ ಹಾನಿಯಾಗಿ ನಿರಂತರ ಸಾಲದ ಸುಳಿಯಲ್ಲಿ ಮುಳುಗುತ್ತಿದ್ದಾನೆ.
ಮಹಾದಾಯಿ ಕಳಸಾ-ಬಂಡೂರಿ ನೀರಿನಿಂದ ಮಲಪ್ರಭೆಯನ್ನು ಭರ್ತಿ ಮಾಡಬೇಕು. ಇಲ್ಲವಾದಲ್ಲಿ ಅಸೂಚಿತ ನೀರಾವರಿ ಕ್ಷೇತ್ರಗಳಲ್ಲಿ ಆಗುವ ಹಾನಿಯನ್ನು ನೀರು ಬರುವವರೆಗೂ ಪ್ರತಿ ವರ್ಷ ಎಕರೆಗೆ ೨೫ ಸಾವಿರ ಪರಿಹಾರ ತಕ್ಷಣ ನೀಡಬೇಕು. ೨೭ ಟಿಎಂಸಿ ನೀರನ್ನು ಕೃಷಿಗಾಗಿ ಒದಗಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಸರ್ವ ಪಕ್ಷ ಸಭೆ ನಡೆಸಿ ಕಾನೂನು ತೊಡಕುಗಳ ನಿವಾರಿಸಿ ಮಹಾದಾಯಿ ಯೋಜನೆ ಅನುಷ್ಠಾನ ಮಾಡಬೇಕು. ಈ ಹಿನ್ನೆಲೆ ಆ. ೮ ರಂದು ನಗರದ ಪ್ರವಾಸ ಮಂದಿರದಲ್ಲಿ ಹೋರಾಟಗಾರರು ಸಭೆ ಏರ್ಪಡಿಸಿದ್ದಾರೆ ಎಂದು ಮಹದಾಯಿ ಕಳಸಾ ಬಂಡೂರಿ ಹೋರಾಟಗಾರ ಶಂಕರ ಅಂಬಲಿ ತಿಳಸಿದ್ದಾರೆ.