2024ರ ಲೋಕಸಭೆ ಚುನಾವಣೆಗೂ ಮುನ್ನ ಸಿಎಎ ಜಾರಿ: ಕೇಂದ್ರ ಸಚಿವ ಅಮಿತ್ ಶಾ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯನ್ನು ಜಾರಿಗೆ ತರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಸಿಎಎ ದೇಶದ ಕಾಯ್ದೆಯಾಗಿದ್ದು, ಅದನ್ನು ಲೋಕಸಭಾ ಚುನಾವಣೆಗೆ ಮುನ್ನವೇ ನೋಟಿಫೈ ಮಾಡಲಾಗುತ್ತದೆ. ಅದರಲ್ಲಿ ಯಾವುದೇ ಗೊಂದಲಗಳಿಲ್ಲ. ಸಿಎಎ ವಿರುದ್ಧ ನಮ್ಮ ಮುಸ್ಲಿಂ ಸಹೋದರರನ್ನು ದಾರಿ ತಪ್ಪಿಸುವುದರ ಜೊತೆಗೆ ಪ್ರಚೋದಿಸಲಾಗುತ್ತಿದೆ. ಈ ಕಾಯ್ದೆ ಕೇವಲ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ಕಿರುಕುಳ ಅನುಭವಿಸಿ ಭಾರತಕ್ಕೆ ಬಂದವರಿಗೆ ಪೌರತ್ವ ನೀಡಲು ಉದ್ದೇಶಿಸಲಾಗಿದೆ. ಸಿಎಎ ಯಾರೊಬ್ಬರ ಭಾರತೀಯ ಪೌರತ್ವ ಕಸಿದುಕೊಳ್ಳಲು ಅಲ್ಲ ಎಂದು ಅವರು ತಿಳಿಸಿದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 370 ಹಾಗೂ ಎನ್​​ ಡಿಎ 400ಕ್ಕೂ ಅಧಿಕ ಸ್ಥಾನಗಳ ಗಳಿಸಲಿದೆ. ಈ ಮೂಲಕ ಸತತ 3ನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾಗಲಿದೆ. ಲೋಕಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಯಾವುದೇ ಸಸ್ಪೆನ್ಸ್ ಇಲ್ಲ. ಈ ಬಾರಿ ಕಾಂಗ್ರೆಸ್ ಹಾಗೂ ಅದನ್ನು ಬೆಂಬಲಿಸುವಂತ ಎಲ್ಲಾ ಪಕ್ಷಗಳು ವಿರೋಧ ಪಕ್ಷಗಳಾಗಿಯೇ ಉಳಿಯಲಿವೆ ಎಂದು ಅವರು ತಿಳಿಸಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆ ಎನ್‌ ಡಿಎ ಮತ್ತು ಇಂಡಿಯಾ ಒಕ್ಕೂಟದ ನಡುವಿನ ಚುನಾವಣೆ ಆಗಿರುವುದಿಲ್ಲ. ಬದಲಿದೆ ಇದು ಅಭಿವೃದ್ಧಿ ಮತ್ತು ಜನರಿಗೆ ನೀಡಿರುವ ಭರವಸೆಯ ಚುನಾವಣೆ ಆಗಲಿದೆ ಎಂದು ಅವರು ತಿಳಿಸಿದರು.

10 ವರ್ಷಗಳ ನಂತರ ನಮ್ಮ ಸರ್ಕಾರ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಿದೆ, ವಿದೇಶಿ ಹೂಡಿಕೆಯನ್ನು ತಂದಿದೆ ಮತ್ತು ಯಾವುದೇ ಭ್ರಷ್ಟಾಚಾರವಿಲ್ಲ. ಆ ಕಾರಣಕ್ಕೆ ಈಗ ನಾವು ಶ್ವೇತಪತ್ರ ಪ್ರಕಟಿಸಿದ್ದೇವೆ ಎಂದು ಹೇಳಿದರು. ಈ ಸಭೆಯಲ್ಲಿ ರಾಮಮಂದಿರದ ಬಗ್ಗೆಯು ಶಾ ಪ್ರಸ್ತಾಪಿಸಿದ್ದಾರೆ. ರಾಮನ ಜನ್ಮ ಸ್ಥಳದಲ್ಲಿಯೇ ಮಂದಿರ ನಿರ್ಮಾಣವಾಗಬೇಕು ಎಂಬುದು ಜನರ 500 ವರ್ಷಗಳಿಂದ ಬೇಡಿಕೆ ಆಗಿತ್ತು. ಆದರೆ ಆಗಾ ತುಷ್ಟೀಕರಣ ರಾಜಕಾರಣ ಮತ್ತು ಕಾನೂನು ಸುವ್ಯವಸ್ಥೆಯನ್ನು ಮುಂದಿಟ್ಟುಕೊಂಡು ರಾಮಮಂದಿರ ನಿರ್ಮಾಣಕ್ಕೆ ಅವಕಾಶ ಸಿಕ್ಕಿಲ್ಲ, ಆದರೆ ಇದೀಗ ನಮ್ಮ ಸರ್ಕಾರ ಅದನ್ನು ಪೂರ್ಣಗೊಳಿಸಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!