2022-23 ನೇ ಶೈಕ್ಷಣಿಕ ವರ್ಷದಿಂದ ತರಗತಿಗೆ ನೂತನ ಶಿಕ್ಷಣ ನೀತಿಯ ಅನ್ವಯ ಪಠ್ಯ ಕ್ರಮ ಜಾರಿ: ಸಚಿವ ನಾಗೇಶ್

ಹೊಸದಿಗಂತ ವರದಿ, ಮಂಗಳೂರು:

ರಾಜ್ಯದಲ್ಲಿ 2022-23 ನೇ ಶೈಕ್ಷಣಿಕ ವರ್ಷದಿಂದ ಒಂದು ಮತ್ತು ಎರಡನೇ ತರಗತಿಗೆ ನೂತನ ಶಿಕ್ಷಣ ನೀತಿಯ ಅನ್ವಯ ಪಠ್ಯ ಕ್ರಮವನ್ನು ಜಾರಿ ಮಾಡಲಾಗುವುದು. ರಾಜ್ಯದ 20,000 ಶಾಲೆಗಳು ಮತ್ತು 276 ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳಲ್ಲಿ ಎನ್‌ಇಪಿ ಪಠ್ಯ ಕ್ರಮ ಜಾರಿಯಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಅವರು ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ವಿಪ್ರೊ ಮತ್ತು ಟಾಟಾ ಸಂಸ್ಥೆಗಳಿಂದ ಅಂಗನವಾಡಿಗಳ ಮೂಲಕ ಈ ಕುರಿತಾಗಿ ಕಲ್ಯಾಣ ಕರ್ನಾಟಕದ ಭಾಗಗಳಲ್ಲಿ ತರಬೇತಿಗಳನ್ನು ನಿರ್ವಹಿಸಲಾಗಿದೆ ಎಂದರು.
ಪ್ರಸ್ತುತ ಸಂಖ್ಯಾಭ್ಯಾಸ ಮತ್ತು ಅಕ್ಷರಾಭ್ಯಾಸಕ್ಕೆ ಒತ್ತು ನೀಡಲಾಗುವುದು. ಒತ್ತಡ ರಹಿತವಾದ ಕಲಿಕೆಯನ್ನು ಪ್ರೋತ್ಸಾಹಿಸುವ ರೀತಿಯಲ್ಲಿ ಪಠ್ಯವನ್ನು ವಿನ್ಯಾಸಗೊಳಿಸಲಾಗಿದೆ. ರಾಜ್ಯದಲ್ಲಿ ಜಾರಿಯಲ್ಲಿರುವ ಚಿಲಿಪಿಲಿ ಮತ್ತು ನಲಿಕಲಿ ಕಲಿಕಾ ಮಾದರಿಗಳು ಎನ್‌ಇಪಿಯ ಆಶಯಗಳಿಗೆ ಹತ್ತಿರದಲ್ಲಿದೆ. ಅದು ನಮಗೆ ಅನುಕೂಲಕರವಾಗಿದೆ ಎಂದು ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಕಲಿಕಾ ಚೇತರಿಕೆಗೆ ಕ್ರಮ
ಕೊರೋನಾದ ಮೂರು ಅಲೆಗಳನ್ನು ನಾವು ಕಂಡಿದ್ದೇವೆ. ಏನಿದ್ದರೂ ಕೋವಿಡ್ ನಿಯಂತ್ರಿಸಬಹುದಾದ ಸೋಂಕು ಎಂಬುದು ಎಲ್ಲರಿಗೂ ಮನದಟ್ಟಾಗಿದೆ. ಕುಸಿದಿರುವ ಶಿಕ್ಷಣದ ಗುಣಮಟ್ಟವನ್ನು ಪುನ:ಸ್ಥಾಪಿಸಬೇಕಿದೆ. ಅದಕ್ಕೆಂದೇ ರಜೆಯನ್ನು ಕಡಿತಗೊಳಿಸಿ ೧೫ ದಿನ ಮುಂಚಿತವಾಗಿ ಶಾಲೆಗಳನ್ನು ಆರಂಭಿಸಲಾಗುತ್ತಿದೆ. `ಕಲಿಕಾ ಚೇತರಿಕೆ’ಗಾಗಿ ಈ ಕ್ರಮ ಎಂದು ವಿವರಿಸಿದ ಸಚಿವರು, ಮುಂದೆ ಸಂದರ್ಭಾನುಸಾರ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದರು.
ಶಿಕ್ಷಣ ಸಂಸ್ಥೆ ಧರ್ಮ ಗ್ರಂಥಗಳನ್ನು ವಿದ್ಯಾರ್ಥಿಗಳಿಗೆ ಹೇರುವಂತಿಲ್ಲ
ಕ್ರಿಶ್ಚನ್ ಶಾಲೆಗಳ ಪಠ್ಯ ಕ್ರಮ ಪರಿಷ್ಕರಣೆಯ ಕುರಿತು ಹೇಳಿಲ್ಲ. ಬೇರೆ ಬೇರೆ ಶಿಕ್ಷಣ ಸಂಸ್ಥೆಗಳ ಮೇಲೆ ಬೈಬಲ್ ಕುರಿತಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ. ಇಲಾಖೆ ಅವರ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲ್ಲ. ವಿದ್ಯಾರ್ಥಿಗಳು ಬೈಬಲ್ ಒಪ್ಪಬೇಕು, ಶಾಲೆಗೆ ಬರುವಾಗ ಅದು ಬ್ಯಾಗಿನಲ್ಲಿರಬೇಕು, ಪ್ರಾರ್ಥನೆಗೆ ಬರುವಾಗ ಕೈಯಲ್ಲಿರ ಬೇಕು ಎಂದು ಶಿಕ್ಷಣ ಸಂಸ್ಥೆಗಳು ಹೇರುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಸಚಿವರು ನುಡಿದರು.
ಕರ್ನಾಟಕ ಶಿಕ್ಷಣ ಕಾಯ್ದೆಯ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಯಾವುದೇ ಶಿಕ್ಷಣ ಸಂಸ್ಥೆ ಧರ್ಮ ಗ್ರಂಥಗಳನ್ನು ವಿದ್ಯಾರ್ಥಿಗಳಿಗೆ ಹೇರುವಂತಿಲ್ಲ. ಕಾನೂನನಲ್ಲಿ ಅವಕಾಶ ಇಲ್ಲ ಎಂದು ಸಚಿವರು ಸ್ಪಷ್ಟ ಪಡಿಸಿದರು.
ನಿಯೋಜನೆ ರದ್ದು
ನಿಯೋಜನೆಯಲ್ಲಿರುವ ಶಿಕ್ಷಕರು ಮತ್ತೆ ತಮ್ಮ ಮೂಲ ಸ್ಥಾನಗಳಿಗೆ ತೆರಳಿ ಕರ್ತವ್ಯಕ್ಕೆ ಹಾಜರಾಗಬೇಕು. ನಿಯೋಜನೆ ತಾತ್ಕಾಲಿಕ ವ್ಯವಸ್ಥೆ, ಅಲ್ಲಿ ಖಾಯಂ ಆಗಿ ಇರಲು ಬರುವುದಿಲ್ಲ. ನಿಯೋಜನೆಯಿಂದ ಅನನುಕೂಲವೇ ಅಧಿಕ. ನಿಯೋಜನೆಯ ಸ್ಥಾನಕ್ಕೆ ಗೌರವ ಶಿಕ್ಷಕರನ್ನು ನೇಮಿಸುವಂತಿಲ್ಲ. ಶಿಕ್ಷಣದ ಗುಣಮಟ್ಟ ಕಾಪಾಡಲು ಈ ನಿರ್ಧಾರ ಪೂರಕವಾಗಲಿದೆ ಎಂದು ಶಿಕ್ಷಣ ಸಚಿವರು ವಿವರಿಸಿದರು.
ಬಿ.ಎಡ್ ಕಾಲೇಜುಗಳ ಪುನರ್ ವಿನ್ಯಾಸ ಮತ್ತು ಸಂಖ್ಯೆ ಇಳಿಕೆಗಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!