ರಾಜ್ಯ ಸರಕಾರದಿಂದ ಐದು ಗ್ಯಾರೆಂಟಿ ಜಾರಿ: ಏನಿದೆ ಷರತ್ತು? ಯಾರಿಗೆಲ್ಲ ಸಿಗಲಿದೆ ಉಚಿತ ಯೋಜನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯ ಸರಕಾರ ಐದು ಗ್ಯಾರೆಂಟಿಯನ್ನು ಜಾರಿಗೊಳಿಸುವ ಘೋಷಣೆ ಮಾಡಿದೆ. ಮಹತ್ವದ ಸಂಪುಟ ಸಭೆ ನಡೆಸಿದ ಸಿದ್ದರಾಮಯ್ಯ ಸರ್ಕಾರ, 5 ಗ್ಯಾರೆಂಟಿ ಯೋಜನೆ ಜಾರಿಗೊಳಿಸಿದೆ.

ಇದರ ಪ್ರಕಾರ ಮಹಿಳೆಯರ ಬಸ್ ಪ್ರಯಾಣ ಜೂನ್ 11 ರಿಂದ ಆರಂಭಗೊಂಡರೆ, ಇತರ ನಾಲ್ಕು ಯೋಜನೆಗಳು ಜುಲೈ 1 ರಿಂದ ಆರಂಭಗೊಳ್ಳುತ್ತಿದೆ.
ಗ್ಯಾರೆಂಟಿ ಯೋಜನೆ ಜಾರಿ ಕುರಿತು ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಯೋಜನೆ ಲಾಭ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹರು ಅರ್ಜಿ ಹಾಕಬೇಕು. ಜೊತೆಗೆ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಲಿಂಕ್ ಸೇರಿದಂತೆ ಇತರ ತಾಂತ್ರಿಕ ಪ್ರಕ್ರಿಯೆಗಳು ನಡೆಯಲಿದೆ. ಅರ್ಜಿಗಳನ್ನು ಪರಿಶೀಲನೆ ನಡೆಸಿ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ. ಬಳಿಕ ಉಚಿತ ಯೋಜನೆಗಳ ಲಾಭ ಸಿಗಲಿದೆ. ಹೀಗಾಗಿ ಮಹಿಳೆಯರ ಉಚಿತ ಬಸ್ ಪ್ರಯಾಣ ಇದೇ ತಿಂಗಳ 11 ರಿಂದ ಜಾರಿಯಾಗಲಿದೆ. ಆದರೆ ಇತರ ಯೋಜನೆಗಳಿಗೆ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಸೇರಿದಂತೆ ಇತರ ದಾಖಲೆಗಳ ಅವಶ್ಯಕತೆ ಇರುವುದರಿಂದ ಜುಲೈ ತಿಂಗಳಿನಿಂದ ಜಾರಿಯಾಗುತ್ತಿದೆ.

1. ಗೃಹಜ್ಯೋತಿ 
ಯಾರು ಎಷ್ಟು ವಿದ್ಯುತ್ ಬಳಸ್ತಾರೆ ಎಂಬುದನ್ನು 12 ತಿಂಗಳ ಸರಾಸರಿ ವಿದ್ಯುತ್ ಬಳಕೆ ಆಧರಿಸಿ, ಅದರ ಮೇಲೆ ಶೇ.10 ರಷ್ಟರವರೆಗಿನ ವಿದ್ಯುತ್ ಉಚಿತ. ಜು.1 ರಿಂದ ಆಗಸ್ಟ್ ಗರೆಗಿನ ಖರ್ಚಿಗೆ ಇದು ಲೆಕ್ಕ. ಜುಲೈನಿಂದ ಮಾಡಿರುವ ಖರ್ಚಿನ ಬಿಲ್ ಆಗಸ್ಟ್ ನಲ್ಲಿ ಬರಲಿದೆ. ಜುಲೈವರೆಗಿನ ಬಾಕಿ ಉಳಿಸಿಕೊಂಡವರಿಗೆ ಸಮಯ ಕೊಡುತ್ತೇವೆ ಅವರೇ ಕಟ್ಟಬೇಕು. ಸರ್ಕಾರ ಕಟ್ಟಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

2. ಗೃಹಲಕ್ಷ್ಮೀ
ಬ್ಯಾಂಕ್ ಖಾತೆ, ಆಧಾರ್ ವಿಲೀನ ಪ್ರಕ್ರಿಯೆ ಆಗಬೇಕಿದೆ. ಸಾಫ್ಟ್ವೇರ್ ಅಭಿವೃದ್ಧಿಪಡಿಸಬೇಕಿದೆ. ಮನೆಯ ಒಡತಿ ಖಾತೆಗೆ ಮಾಸಿಕ 2 ಸಾವಿರ ರೂ. ಜಮೆ ಮಾಡಲಾಗುತ್ತದೆ. ಜೂ.15 ರಿಂದ ಜು.15 ರೊಳಗೆ ಆನ್ ಲೈನ್ ಅಲ್ಲಿ ಅರ್ಜಿ ಹಾಕಬೇಕು. ಬಿಪಿಎಲ್, ಎಪಿಎಲ್ ಎಲ್ಲರೂ ಅರ್ಜಿ ಹಾಕಬಹುದು. 18 ವರ್ಷ ತುಂಬಿದವರು. ಜು.15 ರಿಂದ ಆ.15 ರವರೆಗೆ ಪ್ರಕ್ರಿಯೆ ನಡೆಸಿ, ಆ.15 ರಿಂದ ಜಾರಿಗೆ ಬರಲಿದೆ. ಇದಕ್ಕೆ ಬೇರಾವುದೇ ಷರತ್ತುಗಳಿಲ್ಲ. ಸಾಮಾಜಿಕ ಭದ್ರತಾ ಸೇವೆಗಳಡಿ ಪಿಂಚಣಿಯ ಜೊತೆಗೆ ಇದೂ ಸಿಗಲಿದೆ. ಸರ್ಕಾರದ ನಿವೃತ್ತ ನೌಕರರ ಪಿಂಚಣಿ ಪಡೆಯುತ್ತಿರುವವರಿಗೆ ಇಲ್ಲ. ಮನೆಯ ಯಜಮಾನಿ ಯಾರು ಅನ್ನೋದನ್ನು ಕುಟುಂಬ ನಿರ್ಧರಿಸಿ ಅರ್ಜಿ ಹಾಕಬೇಕು. ಅರ್ಹ ಫಲಾನುಭವಿಗಳಿಗೆ ಆಗಸ್ಟ್ 15 ರಿಂದ 2,000 ರೂಪಾಯಿ ಜಮೆ ಆಗಲಿದೆ.

3. ಅನ್ನಭಾಗ್ಯ
ಕೇಂದ್ರ ಸರ್ಕಾರ ಅಕ್ಕಿಯನ್ನು 5 ಕೆ.ಜಿ.ಗೆ ಇಳಿಸಿದ್ದಾರೆ. 10 ಕೆ.ಜಿ. ಆಹಾರಧಾನ್ಯ ಕೊಡುವುದಾಗಿ ನಾವೀಗ ಹೇಳಿದ್ದೆವು. ಈಗಾಗಲೇ ಆಹಾರಧಾನ್ಯ ಸರಬರಾಜಾಗಿದ್ದು, ದಾಸ್ತಾನು ಇಲ್ಲ. ಹೀಗಾಗಿ ಜು.1 ರಿಂದ ಬಿಪಿಎಲ್ + ಅಂತ್ಯೋದಯ ಅನ್ನ ಕಾರ್ಡುದಾರರಿಗೆ ತಲಾ 10 ಕೆ.ಜಿ. ಅಕ್ಕಿ. ನ್ಯಾಫೆಡ್, ಕೇಂದ್ರ, ಎನ್ ಸಿಸಿ ಎಫ್ ಎಲ್ಲಿಂದಲಾದರೂ ಸರಿ ತಂದು ಕೊಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

4. ಶಕ್ತಿ
ಸಮಾಜದಲ್ಲಿ ಶೇ.50 ರಷ್ಟು ಮಹಿಳೆಯರಿದ್ದಾರೆ. ಸ್ಥಾನಮಾನ ಪರಿಗಣಿಸದೆ ವಿದ್ಯಾರ್ಥಿನಿಯರನ್ನೂ ಒಳಗೊಂಡಂತೆ ಕರ್ನಾಟಕದ ಎಲ್ಲ ಮಹಿಳೆಯರಿಗೆ ಜೂ.11 ರಿಂದ ರಾಜ್ಯದೊಳಗೆ ಸರ್ಕಾರದ ಸಾಮಾನ್ಯ ಬಸ್, ಎಕ್ಸ್ ಪ್ರೆಸ್, (ಎಸಿ, ನಾನ್ ಎಸಿ ಸ್ಲೀಪರ್, ಲಕ್ಸ್ಯುರಿ ಬಸ್ ಬಿಟ್ಟು) ಉಚಿತ ಪ್ರಯಾಣ. ಕೆಎಸ್ಆರ್ಟಿಸಿಯಲ್ಲಿ ಶೇ.50 ರಷ್ಟು ಆಸನ ಮೀಸಲು. ಹೆಣ್ಣು ಮಕ್ಕಳಿಲ್ಲದಿದ್ದರೆ, ಗಂಡಸರು ಕುಳಿತು ಹೋಗಬಹುದು.ಬಿಎಂಟಿಸಿಯಲ್ಲೂ ಮಹಿಳೆಯರಿಗೂ ಉಚಿತ ಪ್ರಯಾಣ ಕಲ್ಪಿಸಲಾಗಿದೆ. ಆದರೆ ಇಲ್ಲಿ ರಿಸರ್ವೇಶನ್ ಇರುವುದಿಲ್ಲ ಎಂದು ಸಿದ್ದಾರಾಮಯ್ಯ ಹೇಳಿದ್ದಾರೆ.

5. ಯುವನಿಧಿ
2022-23 ರಲ್ಲಿ ತೇರ್ಗಡೆ ಹೊಂದಿದ ವೃತ್ತಿಶಿಕ್ಷಣವೂ ಸೇರಿ ಎಲ್ಲ ಪದವೀಧರರು ನೋಂದಣಿ ಮಾಡಿಕೊಂಡ ದಿನದಿಂದ 24 ತಿಂಗಳ(2 ವರ್ಷ)ವರೆಗೆ ಪ್ರತಿ ತಿಂಗಳು 3 ಸಾವಿರ ರೂ., ಡಿಪ್ಲೊಮಾ ಪದವೀಧರರಿಗೆ 1,500 ರೂಪಾಯಿ. ಅಷ್ಟರೊಳಗೆ ಉದ್ಯೋಗ ಪಡೆದವರು ಘೋಷಿಸಿಕೊಳ್ಳಬೇಕು. ಯುವಕ, ಯುವತಿ + ತೃತೀಯಲಿಂಗಿಗಳಿಗೂ ಅನ್ವಯ. 2022-23ರಲ್ಲಿ ತೇರ್ಗಡೆ ಹೊಂದಿದವರು ಈ ಯೋಜನೆಯ ಲಾಭ ಪಡೆಯಲು ಅರ್ಜಿ ಹಾಕಬೇಕು. ನಿರುದ್ಯೋಗ ಯುವಕ-ಯವತಿಗೆ 2 ವರ್ಷ ಹಣ ಜಮೆ ಆಗಲಿದೆ. ಈ ಯೋಜನೆ ಲಾಭ ಪಡೆಯುವ ನಡುವೆ ಉದ್ಯೋಗ ಗಿಟ್ಟಿಸಿಕೊಂಡ ವ್ಯಕ್ತಿಗೆ ಈ ಯೋಜನೆ ಮುಂದುವರಿಯುವುದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!