ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆ ಜಾರಿ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ವರದಿ, ಮೈಸೂರು:

ನಾವು ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನ ಜಾರಿಗೊಳಿಸಿದ್ದೇವೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವ ತನಕ ವೂ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿರುತ್ತವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಶುಕ್ರವಾರ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿಆಯೋಜಿಸಿದ್ದ ಗ್ಯಾರಂಟಿ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಯವರು ನಮ್ಮ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಸುಳ್ಳು ಆರೋಪಗಳು, ಅಪಪ್ರಚಾರಗಳನ್ನು ಮಾಡಿದ್ದಾರೆ. ಗ್ಯಾರಂಟಿ ಯೋಜನೆ ಜಾರಿಯಾಗಲ್ಲ ಎಂದು ಅಪ್ಪಟ ಸುಳ್ಳು ಹೇಳಿದ್ದರು, ಆದರೆ ನಾವು ಹೇಳಿದಂತೆ ಗ್ಯಾರಂಟಿ ಜಾರಿ ಮಾಡಿದ್ದೇವೆ ಎಂದರು.

ಶಕ್ತಿಯೋಜನೆಯಿoದ ಯಾತ್ರಾ ಹಾಗೂ ಪ್ರವಾಸಿ ತಾಣಗಳಿಗೆ ಹೆಚ್ಚಾಗಿ ಮಹಿಳೆಯರು ಬರುತ್ತಿದ್ದಾರೆ. ಇದರಿಂದಾಗಿ ಅಲ್ಲಿ ಪ್ರವಾಸೋದ್ಯಮ ಬೆಳೆಯುತ್ತಿದ್ದು, ಆರ್ಥಿಕ ಚಟುವಟಿಕೆಗಳು ನಡೆಯುತ್ತಿರುವುದರಿಂದ ಎಲ್ಲರಿಗೂ ಅನುಕೂಲವಾಗುತ್ತಿದೆ. ಮಹಿಳೆಯರ ಪ್ರಯಾಣದ ದುಡ್ಡನ್ನ ರಾಜ್ಯ ಸರ್ಕಾರ ಕೆಎಸ್ ಆರ್ ಟಿಸಿಗೆ ಸರ್ಕಾರ ನೀಡುತ್ತಿದೆ. ರಾಜ್ಯದಲ್ಲಿ ಹಸಿವು ನೀಗಿಸಲು ಅನ್ನಭಾಗ್ಯ ಘೋಷಣೆ ಮಾಡಿದ್ದೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ಕುಟುಂಬಕ್ಕೆ ೧೦ ಕೆಜಿ ಅಕ್ಕಿ ಘೋಷಣೆ ಮಾಡಿದ್ದವು. ಅಕ್ಕಿ ಕೊರತೆ ಉಂಟಾಯಿತು. ಆದರೆ ಕೇಂದ್ರ ಸರ್ಕಾರ ನಮಗೆ ಅಕ್ಕಿ ಕೊಡದೇ ಮೋಸಮಾಡಿತು. ೫ ಕೆಜಿ ಅಕ್ಕಿ ಜೊತೆಗೆ ಪ್ರತಿಯೊಬ್ಬರಿಗೂ ೧೭೦ ರೂ ಹಾಕುತ್ತಿದ್ದೇವೆ. ಅಂದು ಬಿಜೆಪಿಯವರು ಅಕ್ಕಿಯನ್ನ ೭ ಕೆಜಿಯಿಂದ ೫ಕೆಜಿಗೆ ಇಳಿಸಿದ್ದರು ಎಂದು ಕಿಡಿಕಾರಿದರು.

ಗ್ಯಾರಂಟಿ ಯೋಜನೆಗಳು ಎಲ್ಲಾ ಜಾತಿಯ ಬಡವರು, ಎಲ್ಲಾ ಧರ್ಮದ ಬಡವರು ಅವರೆಲ್ಲರಿಗೂ ಕೂಡ ಈ ಯೋಜನೆಗಳು ತಲುಪುವ ಕೆಲಸ ಮಾಡುತ್ತೇವೆ. ಭಾರತೀಯ ಜನತಾ ಪಕ್ಷದ ಬಡವರಿಗೂ ಕೂಡ ಕೊಡುತ್ತಿದ್ದೇವೆ. ನಾವು ಯಾವುದೇ ಧರ್ಮ ಜಾತಿ ಪಕ್ಷ ಪಂಗಡ ಎಂದು ಬೇಧ ಮಾಡುವುದಿಲ್ಲ. ಎಲ್ಲಾ ಮಹಿಳೆಯರು ಎಲ್ಲಾ ಬಡವರು ಅವರಿಗೆ ಸಹಾಯ ಮಾಡಬೇಕೆಂಬುದೇ ನಮ್ಮ ಗ್ಯಾರಂಟಿ ಯೋಜನೆಗಳ ಪ್ರಮುಖ ಉದ್ದೇಶವಾಗಿದೆ ಎಂದರು.

ನಾವು ನುಡಿದಂತೆ ನಡೆದಿದ್ದೇವೆ, ಆದರೆ ಬಿಜೆಪಿಯವರು ಸುಳ್ಳುಗಳನ್ನೇ ಹೇಳಿಕೊಂಡು ಬಂದಿದ್ದಾರೆ. ತಾನು ಅಧಿಕಾರಕ್ಕೆ ಬಂದರೆ ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬ ಭಾರತೀಯರ ಖಾತೆಗೆ ೧೫ ಲಕ್ಷ ರೂ ಹಾಕುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ್ದರು. ೧೫ ಲಕ್ಷ ಇರಲಿ, ೧೫ ಪೈಸೆನಾದ್ರೂ ಇಲ್ಲಿಯ ತನಕ ಯಾರಿಗಾದರೂ ಹಾಕಿದರಾ? ಬಿಜೆಪಿಯವರಾಗಲಿ, ಮೋದಿಯವರಾಗಲೀ ಚುನಾವಣೆಯಲ್ಲಿ ಕೊಟ್ಟ ಭರವಸೆಗಳಲ್ಲಿ ಒಂದನ್ನಾದರೂ ಈಡೇರಿಸಿದ್ದಾರಾ ಎಂದು ಪ್ರಶ್ನಿಸಿ ಎಂದರು.

ಮೈಸೂರು ಜಿಲ್ಲೆಯ ಅಭಿವೃದ್ಧಿಗೆ- ಮೈಸೂರು ಜನರ ಪ್ರಗತಿಗೆ ಬಿಜೆಪಿ ಇವತ್ತಿನವರೆಗೂ ಒಂದೇ ಒಂದು ಕಾರ್ಯಕ್ರಮವನ್ನೂ ಮಾಡಲೇ ಇಲ್ಲ ಏಕೆ ಎಂದು ಸಿ.ಎಂ ಸಿದ್ದರಾಮಯ್ಯ ಆಕ್ರೋಶದಿಂದ ಪ್ರಶ್ನಿಸಿದರು.ಆಸ್ಪತ್ರೆ, ಕಾಲೇಜು, ಮಾರುಕಟ್ಟೆ , ರಸ್ತೆ, ನೀರು ಸೇರಿ ಮೈಸೂರಿನ ಎಲ್ಲಾ ಪ್ರಗತಿ ಕಾರ್ಯಕ್ರಮಗಳಿಗೆ ನಮ್ಮ ಸರ್ಕಾರ ನಿರಂತರವಾಗಿ ಅನುದಾನ ನೀಡುತ್ತಲೇ ಬಂದಿದೆ. ಈ ಬಜೆಟ್ ನಲ್ಲೂ ಹಣ ಮೀಸಲಿಟ್ಟಿದ್ದೇವೆ ಎಂದು ವಿವರಿಸಿದರು.

ಬಿಜೆಪಿಯವರು ಸಂವಿಧಾನ ವಿರೋಧಿಗಳು. ಸಂವಿಧಾನದಲ್ಲಿ ಜಾತಿ, ಅಸಮಾನತೆ, ತಾರತಮ್ಯ ಹೋಗಬೇಕು, ಸಮ ಸಮಾಜ ನಿರ್ಮಾಣವಾಗಬೇಕು ಎಂದು ಹೇಳಿದೆ. ಈ ರೀತಿಯಾಗುವುದು ಬಿಜೆಪಿಯವರಿಗೆ ಇಷ್ಟವಿಲ್ಲ. ಹಾಗಾಗಿ ಸಂವಿಧಾನವನ್ನು ಬದಲಾಯಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಿಜೆಪಿಯ ಹಿಡನ್ ಅಜೆಂಡಾವೇ ಸಂವಿಧಾನ ಬದಲಾಯಿಸುವುದು. ಅದನ್ನು ಅನಂತ್ ಕುಮಾರ್ ಹೆಗೆಡೆಯಂತವರ ಮೂಲಕ ಹೇಳಿಸುತ್ತಿದ್ದಾರೆ. ಒಂದು ವೇಳೆ ಬಿಜೆಪಿಯವರು ಸಂವಿಧಾನ ವಿರೋಧಿಯಾಗದಿದ್ದರೆ, ಅನಂತ್ ಕುಮಾರ್ ಹೆಗಡೆಯವರನ್ನು ಯಾಕೇ ಸಸ್ಪೆಂಡ್ ಮಾಡಿಲ್ಲ, ಪಕ್ಷದಿಂದ ಯಾಕೇ ಉಚ್ಚಾಟಿಸಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಸಂವಿಧಾನ ಉಳಿದರೆ ಮಾತ್ರ ದೀನ ದಲಿತರು, ಬಡವರು ಉಳಿಯಲು ಸಾಧ್ಯ. ಇಲ್ಲದಿದ್ದರೆ ಯಾರಿಗೂ ಉಳಿಗಾಲವಿಲ್ಲ. ಹಾಗಾಗಿ ಎಲ್ಲರೂ ಸೇರಿ ಸಂವಿಧಾನವನ್ನು ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.

ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಮಾಜಿ ಸಚಿವರಾದ ಶಾಸಕ ತನ್ವೀರ್ ಸೇಠ್, ಗ್ಯಾರಂಟಿ ಯೋಜನೆಗಳ ಜಾರಿ ಪ್ರಾಧಿಕಾರದ ಉಪಾಧ್ಯಕ್ಷರಾದ ಪುಷ್ಪ ಅಮರ್ ನಾಥ್ , ಆಶ್ರಯ ಸಮಿತಿ ಅಧ್ಯಕ್ಷರಾದ ಡಾ.ಯತೀಂದ್ರ ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಬೃಹತ್ ಸಮಾವೇಶದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಶಾಸಕರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!