ಲೋಕಸಭೆಯಲ್ಲಿ ಹೊಸ ನಿಯಮ ಜಾರಿ: ಇನ್ಮುಂದೆ ಪ್ರಮಾಣ ವಚನ ಸ್ವೀಕರಿಸುವಾಗ ಘೋಷಣೆ ಕೂಗುವಂತಿಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಂಸದರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಿಯಮದಲ್ಲಿ ಕೆಲವು ತಿದ್ದುಪಡಿಗಳನ್ನು ಜಾರಿಗೆ ತಂದಿದ್ದಾರೆ.

ಇನ್ನು ಮುಂದೆ ಸದಸ್ಯರು ಪ್ರಮಾಣ ವಚನ ಸ್ವೀಕರಿಸುವಾಗ ಯಾವುದೇ ಘೋಷಣೆ ಕೂಗುವಂತಿಲ್ಲ. ಈ ಬಾರಿ ಸಂಸದರು ಪ್ರಮಾಣ ವಚನ ಸ್ವೀಕರಿಸುವಾಗ ಘೋಷಣೆ ಕೂಗಿದ್ದು ವಿವಾದದ ಕಿಡಿ ಹೊತ್ತಿಸಿದ ಹಿನ್ನೆಲೆಯಲ್ಲಿ ಸ್ಪೀಕರ್‌ ಈ ನಿರ್ಧಾರ ಕೈಗೊಂಡಿದ್ದಾರೆ.

ಸಂಸದರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕೆಲವರು ಜೈ ಸಂವಿಧಾನ ಎಂದು ಕೂಗಿದ್ದರೆ, ಹೈದರಾಬಾದ್‌ ಸಂಸದ, ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ʼಜೈ ಪ್ಯಾಲೆಸ್ತೀನ್​’ ಎಂದು ಘೋಷಣೆ ಮೊಳಗಿಸಿದ್ದರು. ಉತ್ತರ ಪ್ರದೇಶದ ಬರೇಲಿಯ ಬಿಜೆಪಿ ಸಂಸದ ಛತ್ರ ಪಾಲ್ ಸಿಂಗ್ ಗಂಗ್ವಾರ್ ಪ್ರಮಾಣ ವಚನದ ಕೊನೆಗೆ “ಜೈ ಹಿಂದೂ ರಾಷ್ಟ್ರ” ಎಂದು ಹೇಳಿದ್ದರು.

ಬಳಿಕ ಈ ವಿಚಾರ ವಿವಾದ ಎಬ್ಬಿಸಿತ್ತು. ದೇಶಾದ್ಯಂತ ಪರ-ವಿರೋಧ ಚರ್ಚೆ ನಡೆದಿದ್ದವು. ಇದರ ನಂತರ ಬಿರ್ಲಾ ಅವರು ಸದಸ್ಯರ ಪ್ರಮಾಣ ವಚನ ಸ್ವೀಕಾರ ಮತ್ತು ದೃಢೀಕರಣಕ್ಕಾಗಿ ನಿಯಮಗಳನ್ನು ರೂಪಿಸಲು ಸಮಿತಿಯನ್ನು ರಚಿಸಿದ್ದರು. ಸಮಿತಿಯ ಶಿಫಾರಸ್ಸಿನಂತೆ ಇದೀಗ ಲೋಕಸಭೆಯ ಕಾರ್ಯ ವಿಧಾನ ಮತ್ತು ನಡವಳಿಕೆಯ ನಿಯಮಗಳ 389ನೇ ನಿಯಮಕ್ಕೆ ತಿದ್ದುಪಡಿ ತರಲಾಗಿದೆ. ಓಂ ಬಿರ್ಲಾ ಅವರು ಸ್ಪೀಕರ್ ನಿರ್ದೇಶನಗಳಿಗೆ ಹೊಸ ಷರತ್ತು ಸೇರಿಸಿದ್ದಾರೆ.

ಹೊಸ ನಿಯಮದ ಪ್ರಕಾರ ಸಂಸದರು ಪ್ರಮಾಣ ವಚನ ಸ್ವೀಕರಿಸುವ ಮೊದಲು ಅಥವಾ ಬಳಿಕ ಯಾವುದೇ ಪದಗಳು ಅಥವಾ ಅಭಿವ್ಯಕ್ತಿಗಳನ್ನು ಬಳಸಬಾರದು. ಒಂದುವೇಳೆ ನಿಯಮ ಉಲ್ಲಂಘಿಸಿದರೆ ಸಂಸದರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಬುಧವಾರ 18ನೇ ಲೋಕಸಭೆಯ ಮೊದಲ ಅಧಿವೇಶನದ ಕೊನೆಯಲ್ಲಿ ಮಾಹಿತಿ ನೀಡಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!