ಭಾರತದಲ್ಲಿ ಮೂರು ಬುಲೆಟ್​ ಟ್ರೈನ್ ಯೋಜನೆ ಜಾರಿ: ಪ್ರಧಾನಿ ಮೋದಿ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂದಿನ ದಿನಗಳಲ್ಲಿ ಭಾರತದಲ್ಲಿ ಮೂರು ಬುಲೆಟ್​ ಟ್ರೈನ್​ಗಳನ್ನು ಜಾರಿಗೊಳಿಸುವುದಾಗಿ ಪ್ರಧಾನಿ ಮೋದಿ ಅವರು ಮಹತ್ವದ ಘೋಷಣೆ ಮಾಡಿದ್ದಾರೆ.

ಭಾನುವಾರ ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ದೇಶದ ಉತ್ತರ, ಪೂರ್ವ ಮತ್ತು ದಕ್ಷಿಣ ಭಾಗಕ್ಕೆ ಹೊಸ ಮೂರು ಬುಲೆಟ್​ ಟ್ರೈನ್​ ನೀಡುವುದಾಗಿ ತಿಳಿಸಿದ್ದಾರೆ.

ಇಂದು ಅಹಮದಾಬಾದ್ ಮುಂಬೈ ಬುಲೆಟ್ ಟ್ರೈನ್ ಯೋಜನೆ ಕಾಮಗಾರಿ ವೇಗವಾಗಿ ಸಾಗುತ್ತಿದೆ. ಬಹುತೇಕ ಮುಕ್ತಾಯ ಹಂತದಲ್ಲಿದೆ. ಅದೇ ರೀತಿಯಲ್ಲಿ, ಉತ್ತರ ಭಾರತದಲ್ಲಿ ಒಂದು ಬುಲೆಟ್ ರೈಲು, ದಕ್ಷಿಣ ಭಾರತದಲ್ಲಿ ಒಂದು ಬುಲೆಟ್ ರೈಲು ಮತ್ತು ಪೂರ್ವ ಭಾರತದಲ್ಲಿ ಒಂದು ಬುಲೆಟ್ ಟ್ರೈನ್ ಓಡಾಡಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇದಕ್ಕಾಗಿ ಸಮೀಕ್ಷಾ ಕಾರ್ಯವೂ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಬಿಜೆಪಿಯ ಸಂಕಲ್ಪ ಅನಾವರಣಗೊಳಿಸಿದ ಬಳಿಕ ಪ್ರಧಾನಿ ಮೋದಿ ಅವರು ಹೇಳಿದರು.

ದೇಶದ ಮೂಲೆ ಮೂಲೆಗೆ ವಂದೇ ಭಾರತ್ ರೈಲುಗಳನ್ನು ವಿಸ್ತರಿಸುವ ಗುರಿ ಹೊಂದಿರುವುದಾಗಿ ಹೇಳಿದ ಮೋದಿ ಅವರು, ವಂದೇ ಭಾರತ್‌ನ ಮೂರು ಮಾದರಿಯ ವಂದೇ ಭಾರತ್ ಸ್ಲೀಪರ್, ವಂದೇ ಭಾರತ್ ಚೇರ್‌ಕಾರ್ ಮತ್ತು ವಂದೇ ಭಾರತ್ ಮೆಟ್ರೋ ರೈಲುಗಳು ದೇಶಾದ್ಯಂತ ಓಡಾಡಲಿವೆ ಎಂದು ಮೋದಿ ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!