ಹೊಸದಿಗಂತ ಡಿಜಿಟಲ್ ಡೆಸ್ಕ್
ಗುಜರಾತ್ ಚುನಾವಣಾ ಕಣ ಕಾವೇರುತ್ತಿದ್ದು, ಎಲ್ಲ ಪಕ್ಷಗಳು ಗೆಲುವಿಗಾಗಿ ಭರದ ಸಿದ್ಧತೆ ನಡೆಸುತ್ತಿದೆ. ಮತ್ತೆ ಅದಿಕಾರಕ್ಕೇರಲು ಬೆಜೆಪಿವು ರಣತಂತ್ರ ರೂಪಿಸುತ್ತಿದ್ದು, ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ.
ಬಿಜೆಪಿವು ಏಕರೂಪ ನಾಗರಿಕ ಸಂಹಿತೆ (Uniform Civil Code) ಅನುಷ್ಠಾನಗೊಳಿಸುವುದು, 20 ಲಕ್ಷ ಉದ್ಯೋಗ ಸೃಷ್ಟಿಸುವುದು ಸೇರಿದಂತೆ ಹಲವು ಭರವಸೆಗಳನ್ನು ಮತದಾರರಿಗೆ ನೀಡಿದೆ.
ಪಕ್ಷದ ಪ್ರಣಾಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿಆರ್ ಪಾಟೀಲ್ ಶನಿವಾರ ಬಿಡುಗಡೆ ಮಾಡಿದರು.
‘ಸಂಕಲ್ಪ ಪಾತ್ರ’ ಯೋಜನೆಯಡಿ ಮುಂದಿನ 5 ವರ್ಷಗಳಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿಸಲಾಗುವುದು. ಗುಜರಾತನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡಲಾಗುವುದು ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಸಂಭಾವ್ಯ ಆತಂಕಗಳು ಮತ್ತು ಭಯೋತ್ಪಾದಕ ಸಂಘಟನೆಗಳು ಮತ್ತು ಭಾರತ ವಿರೋಧಿ ಶಕ್ತಿಗಳ ಸ್ಲೀಪರ್ ಸೆಲ್‌ಗಳನ್ನು ಗುರುತಿಸುವುದು ಹಾಗೂ ಅವುಗಳನ್ನು ಮಟ್ಟಹಾಕಲು ನಾವು ಮೂಲಭೂತವಾಧಿಕರಣ ವಿರೋಧಿ ಘಟಕವನ್ನು ರಚಿಸಲಿದ್ದೇವೆ ಎಂದು ಘೋಷಣೆ ಮಾಡಿದ್ದಾರೆ.
|
ಪ್ರಣಾಳಿಕೆ ಸಿದ್ಧಪಡಿಸಲು ಗುಜರಾತ್‌ನ ಒಂದು ಕೋಟಿಗೂ ಹೆಚ್ಚು ಜನರಿಂದ ಅಭಿಪ್ರಾಯ ತೆಗೆದುಕೊಳ್ಳಲಾಗಿದ್ದು, ಇದಕ್ಕಾಗಿ ವಾಟ್ಸ್‌ಆ್ಯಪ್ ಸಂಖ್ಯೆಯನ್ನೂ ನೀಡಲಾಗಿದೆ ಎಂದು ಗುಜರಾತ್ ಬಿಜೆಪಿ ಅಧ್ಯಕ್ಷ ಪಾಟೀಲ್ ಹೇಳಿದ್ದಾರೆ.
ಬಿಜೆಪಿ ನೀಡಿರುವ 10 ಭರವಸೆಗಳು:
- ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಉದ್ಯೋಗ,
- 2 ಲಕ್ಷದವರೆಗೆ ರೈತರಿಗೆ ಸಾಲ ಸೌಲಭ್ಯ ನೀಡಲು ಕ್ರೆಡಿಟ್ ಕಾರ್ಡ್
- ನೀರಾವರಿಗೆ 25 ಸಾವಿರ ಕೋಟಿ ಅನುದಾನ
- ಮುಂದಿನ ಐದು ವರ್ಷದಲ್ಲಿ ಮಹಿಳೆಯರಿಗೆ 1 ಲಕ್ಷ ಉದ್ಯೋಗ ಮೀಸಲು
- ಸಮಿತಿಯ ಶಿಫಾರಸಿನಂತೆ ಏಕರೂಪ ನಾಗರಿಕ ಸಂಹಿತೆ ಅನುಷ್ಠಾನ
- ಕೃಷಿ ಮೂಲಸೌಕರ್ಯ ನಿಧಿಯಡಿ 10 ಸಾವಿರ ಕೋಟಿ ರೂ. ಅನುದಾನ
- ದೇವಭೂಮಿ ದ್ವಾರಕಾ ಕಾರಿಡಾರ್ ನಿರ್ಮಾಣ
- 20 ಸಾವಿರ ಸರ್ಕಾರಿ ಶಾಲೆಗಳ ಸಂಪೂರ್ಣ ಅಭಿವೃದ್ಧಿ
- ಬಾಲಕಿಯರಿಗೆ ಉಚಿತ ಎಲೆಕ್ಟ್ರಿಕ್ ಸ್ಕೂಟಿ
- ಗೋಶಾಲೆಗಳಿಗೆ 500 ಕೋಟಿ ರೂಪಾಯಿ ಅನುದಾನ
ಬಳಿಕ ಮಾತನಾಡಿದ ನಡ್ಡಾ, ನಮ್ಮ ಸಂಕಲ್ಪ ಪತ್ರ ಕೇವಲ ಭರವಸೆಗಳ ದಾಖಲೆಯಲ್ಲ ಎಂದು ಹೇಳಿದ್ದಾರೆ. ಬಿಜೆಪಿ ಸರ್ಕಾರ ಹೇಳಿದ್ದನ್ನೇ ಮಾಡುತ್ತದೆ. ನಾವು ಸಂವಿಧಾನದ ಪ್ರಕಾರ ಹೋಗುತ್ತೇವೆ. ಪ್ರಣಾಳಿಕೆಯಲ್ಲಿ, ಗುಜರಾತ್‌ನಲ್ಲಿ 3 ಸಿವಿಲ್ ಮೆಡಿಸಿಟಿ ಮತ್ತು ಎರಡು ಎಐಐಎಂಎಸ್ ತರಹದ ಸಂಸ್ಥೆಗಳನ್ನು ಸ್ಥಾಪಿಸುವುದಾಗಿ ಪಕ್ಷವು ಭರವಸೆ ನೀಡಿದೆ. ಇದಲ್ಲದೇ ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರದಲ್ಲಿ ಎರಡು ಸೀ ಫುಡ್ ಪಾರ್ಕ್ ಗಳನ್ನು ಸ್ಥಾಪನೆ ಮಾಡಲಿದ್ದೇವೆ ಎಂದರು.
ಸಂಕಲ್ಪ ಪತ್ರದಲ್ಲಿ ಪ್ರಧಾನ ಮಂತ್ರಿ ಆರೋಗ್ಯ ವಿಮೆ ಯೋಜನೆಯನ್ನು 5 ರಿಂದ 10 ಲಕ್ಷಕ್ಕೆ ಹೆಚ್ಚಿಸಲಾಗುವುದು, ನೀರಾವರಿ ಯೋಜನೆಯಲ್ಲಿ 25 ಸಾವಿರ ಕೋಟಿ ವರೆಗೆ ಹೂಡಿಕೆ ಮಾಡಲಾಗುವುದು, 25 ಬಿರ್ಸಾ ಮುಂಡಾ ವಸತಿ ಶಾಲೆಗಳನ್ನು ತೆರೆಯಲಾಗುವುದು.ಶ್ರಮಿಕ್ ಕ್ರೆಡಿಟ್ ಕಾರ್ಡ್‍ನಲ್ಲಿ 2 ಲಕ್ಷದವರೆಗೆ ಸಾಲ, ವಿದ್ಯಾರ್ಥಿನಿಯರಿಗೆ ಉಚಿತ ಎಲೆಕ್ಟ್ರಿಕ್ ಸ್ಕೂಟಿ ನೀಡಲಾಗುವುದು, ಕೃಷಿ ಮೂಲಸೌಕರ್ಯ ನಿಧಿಯಡಿ 10 ಸಾವಿರ ಕೋಟಿ ರೂ. ಗುಜರಾತ್‍ನಲ್ಲಿ ವಿನಿಯೋಗಿಸಲಾಗುವುದು ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿದೆ.
ಗುಜರಾತ್ ವಿಧಾನಸಭೆಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತ ಡಿಸೆಂಬರ್ 1 ರಂದು ನಡೆಯಲಿದ್ದರೆ, 2ನೇ ಹಂತ ಡಿಸೆಂಬರ್ 5 ರಂದು ನಡೆಯಲಿದೆ. ಫಲಿತಾಂಶ ಡಿಸೆಂಬರ್ 8 ರಂದು ಪ್ರಕಟವಾಗಲಿದೆ.