ನವಮಂಗಳೂರು ಬಂದರಿನ ಸಾಮರ್ಥ್ಯ ವೃದ್ಧಿಗೆ ವಿವಿಧ ಯೋಜನೆಗಳ ಜಾರಿ: ಡಾ. ಎ.ವಿ. ರಮಣ

ಹೊಸದಿಗಂತ ವರದಿ, ಮಂಗಳೂರು:

ನವಮಂಗಳೂರು ಬಂದರಿನ ಸಾಮರ್ಥ್ಯ ವೃದ್ಧಿಗೆ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆಯಡಿ ನವಮಂಗಳೂರು ಬಂದರು ಪ್ರಾಧಿಕಾರ ಒಟ್ಟು 695 ಕೋಟಿ ರೂ. ವೆಚ್ಚದ ಮೂರು ಯೋಜನೆಗಳನ್ನು ಕೈಗೊಂಡಿದೆ ಎಂದು ಎನ್‌ಎಂಪಿಎ ಅಧ್ಯಕ್ಷ ಡಾ. ಎ.ವಿ. ರಮಣ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜೆಎಸ್‌ಡಬ್ಲ್ಯೂ ಕಂಪೆನಿ ಸಹಯೋಗದಲ್ಲಿ 281 ಕೋಟಿ ರೂ. ವೆಚ್ಚದಲ್ಲಿ ಬರ್ತ್ ನಂ. 14 ರ ಯಾಂತ್ರೀಕರಣ, ಬೃಹತ್ ಸರಕುಗಳ ನಿರ್ವಹಣೆಗಾಗಿ 217 ಕೋಟಿ ರೂ. ವೆಚ್ಚದಲ್ಲಿ ಬರ್ತ್ ನಂ. 17 ರ ನಿರ್ಮಾಣ, ಕುಳಾಯಿಯಲ್ಲಿ 197  ಕೋಟಿ ರೂ. ವೆಚ್ಚದಲ್ಲಿ ಮೀನುಗಾರಿಕಾ ಹಾರ್ಬರ್ ನಿರ್ಮಾಣವನ್ನು ಎನ್‌ಎಂಪಿಎ ಕೈಗೆತ್ತಿಕೊಳ್ಳಲಿದೆ ಎಂದು ಅವರು ಹೇಳಿದರು.
ಕಂಟೈನರ್ ನಿರ್ವಹಣೆಗಾಗಿ ಬಂದರಿನ ಸಾಮರ್ಥ್ಯ ವೃದ್ಧಿಸಬೇಕಿದೆ. ರಾಜ್ಯದ ಒಳನಾಡಿನ ವ್ಯವಹಾರವನ್ನು ಹೆಚ್ಚಿಸಲು ಬರ್ತ್ ನಂ. ೧೪ನ್ನು ಯಂತ್ರದ ಮೂಲಕ ನಿರ್ವಹಣೆ ಮಾಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಎನ್‌ಎಂಪಿಎ ಪಿಪಿಪಿ ಮಾದರಿಯಲ್ಲಿ ಕಂಟೈನರ್ ಟರ್ಮಿನಲ್‌ನ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಜೆಎಸ್‌ಡಬ್ಲ್ಯೂ ಕಂಪೆನಿ ಜತೆ ಒಪ್ಪಂದ ಮಾಡಿಕೊಂಡಿದೆ. ಬಹು ಉದ್ದೇಶಿತ ಸರಕು ನಿರ್ವಹಣೆಗಾಗಿ ಹೊಸ ಬರ್ತ್ (ಬರ್ತ್ ನಂ.17)ನ್ನು 217 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಈ ಯೋಜನೆ ಅಂದಾಜು2000 ಮಂದಿಗೆ ಉದ್ಯೋಗ ಕಲ್ಪಿಸುವ ನಿರೀಕ್ಷೆಯಿದೆ. ಡಿಪಿಆರ್ ಪ್ರಕಾರ ಬರ್ತ್ ನಂ. 17  ಬೃಹತ್ ಸರಕುಗಳ 131 ಹಡಗುಗಳನ್ನು ನಿರ್ವಹಿಸಲಿದೆ ಎಂದರು.
ಎನ್‌ಎಂಪಿಎ ಕುಳಾಯಿಯಲ್ಲಿ 197 ಕೋಟಿ ರೂ. ವೆಚ್ಚದಲ್ಲಿ ಮೀನುಗಾರಿಕಾ ಜೆಟ್ಟಿ ನಿರ್ಮಾಣಕ್ಕೆ ಮುಂದಾಗಿದೆ. ಇಲ್ಲಿ ಅಗತ್ಯ ಮೂಲಸೌಲಭ್ಯಗಳ ಜತೆ ಮೀನು ಹರಾಜುಕಟ್ಟೆ, ಕೋಲ್ಡ್ ಸ್ಟೋರೇಜ್ ಇರಲಿದೆ. ಇದು ದೇಶಿಯ ಮತ್ತು ವಿದೇಶಿ ಮಾರುಕಟ್ಟೆಗೆ ಮೀನು ಮತ್ತು ಸಮುದ್ರ ಆಹಾರ ಉತ್ಪನ್ನಗಳ ಪೂರೈಕೆ ಹೆಚ್ಚಳಕ್ಕೆ ಕೊಡುಗೆ ನೀಡಲಿದೆ. ಮಂಗಳೂರಿನ ಹಳೆ ಬಂದರಿನ ಒತ್ತಡವನ್ನು ಕುಳಾಯಿ ಜೆಟ್ಟಿ ಕಡಿಮೆ ಮಾಡಲಿದೆ. ಇದರಿಂದ 2720 ಮಂದಿ ಮೀನುಗಾರರಿಗೆ, ಸಮುದ್ರತೀರ ಸಂಯೋಜಿತ ಉದ್ದಿಮೆಗಳಲ್ಲಿ 1280 ಮಂದಿಗೆ ಉದ್ಯೋಗಾವಕಾಶ ದೊರೆಯಲಿದೆ. ಈ ಜೆಟ್ಟಿ ನಿರ್ಮಾಣ ವಿಚಾರ ನ್ಯಾಯಾಲಯದ ಮುಂದಿದ್ದು, ವರ್ಕ್ ಆರ್ಡರ್ ನೀಡಲು ಹೈಕೋಟ್ ಎನ್‌ಎಂಪಿಎಗೆ ಸೂಚಿಸಿದೆ ಎಂದರು.
ಎನ್‌ಎಂಪಿಎ ಉಪಾಧ್ಯಕ್ಷ ಕೆ.ಜಿ. ನಾಥ್ ಉಪಸ್ಥಿತರಿದ್ದರು.

- Advertisement - Ply

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!