ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಯಾದ ಅನ್ನಭಾಗ್ಯದ ಅಕ್ಕಿ ಕಾಳಸಂತೆಯಲ್ಲಿ ರಾಜಾರೋಷವಾಗಿ ಮಾರಾಟವಾಗುತ್ತಿರುವುದು ಸರ್ಕಾರಕ್ಕೆ ತಲೆನೋವಾಗಿ ಮಾರ್ಪಟ್ಟಿದೆ. ಈ ಅಕ್ರಮ ದಂಧೆಗೆ ಕಡಿವಾಣ ಹಾಕಲು ಸರ್ಕಾರ ಭರ್ಜರಿ ಮಾಸ್ಟರ್ ಪ್ಲಾನ್ ರೂಪಿಸಿದೆ.
ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ನೇತೃತ್ವದಲ್ಲಿ ಕಳ್ಳಸಂತೆಕೋರರ ಜಾಲ ಧ್ವಂಸಗೊಳಿಸಲು ಹೈಟೆಕ್ ನಿಯಮಗಳನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ.
50 ಕೋಟಿ ರೂ. ಮೌಲ್ಯದ ಅಕ್ಕಿ ವಶ; ಆದರೂ ನಿಲ್ಲದ ದಂಧೆ!
ಅನ್ನಭಾಗ್ಯ ಯೋಜನೆ ಆರಂಭವಾದ ದಿನದಿಂದ ಈವರೆಗೆ ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ಹಾಗೂ ಸಂಗ್ರಹಿಸಿಟ್ಟಿದ್ದ ಕಳ್ಳಸಂತೆಕೋರರ ವಿರುದ್ಧ ರಾಜ್ಯಾದ್ಯಂತ ಬರೊಬ್ಬರಿ 1,493 ಪ್ರಕರಣಗಳನ್ನು ದಾಖಲಿಸಲಾಗಿದೆ. ಕಾರ್ಯಾಚರಣೆ ವೇಳೆ ಸುಮಾರು 50 ಕೋಟಿ ರೂಪಾಯಿ ಮೌಲ್ಯದ ರೇಷನ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆಯಾದರೂ, ಬಡವರ ಹೊಟ್ಟೆಗೆ ಕನ್ನ ಹಾಕುವ ಈ ಜಾಲ ಇನ್ನೂ ಸಕ್ರಿಯವಾಗಿರುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.
ದಂಧೆ ತಡೆಯಲು ಸರ್ಕಾರದ ‘ಹೈಟೆಕ್’ ತಂತ್ರಗಳು
ಅನ್ನಭಾಗ್ಯ ಅಕ್ಕಿ ಸಾಗಿಸುವ ಲಾರಿಗಳು ಗೋದಾಮಿನಿಂದ ಹೊರಟು ನ್ಯಾಯಬೆಲೆ ಅಂಗಡಿ ತಲುಪುವವರೆಗೆ ಪ್ರತಿಯೊಂದು ಹೆಜ್ಜೆಯನ್ನೂ ಕಮಾಂಡ್ ಸೆಂಟರ್ ಮೂಲಕ ರಿಯಲ್ ಟೈಮ್ ಮಾನಿಟರಿಂಗ್ ಮಾಡಲಾಗುತ್ತದೆ. ಲಾರಿಗಳು ಮಧ್ಯದಲ್ಲಿ ಮಾರ್ಗ ಬದಲಿಸಿದರೆ ತಕ್ಷಣ ಸಿಕ್ಕಿಬೀಳಲಿವೆ.
ನ್ಯಾಯಬೆಲೆ ಅಂಗಡಿಗಳಲ್ಲಿ ಗ್ರಾಹಕರಿಗೆ ತೂಕದಲ್ಲಿ ಮೋಸ ಮಾಡುವುದನ್ನು ಮತ್ತು ಕಳ್ಳದಾರಿಯಲ್ಲಿ ಅಕ್ಕಿ ಸಾಗಿಸುವುದನ್ನು ತಪ್ಪಿಸಲು ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ.
ರೇಷನ್ ಅಂಗಡಿ ಸಮಯ ವಿಸ್ತರಣೆ
ಫಲಾನುಭವಿಗಳು ಕೆಲಸದ ಒತ್ತಡದಿಂದಾಗಿ ರೇಷನ್ ಪಡೆಯಲು ತೊಂದರೆಯಾಗುತ್ತಿರುವುದನ್ನು ತಪ್ಪಿಸಲು ನ್ಯಾಯಬೆಲೆ ಅಂಗಡಿಗಳ ಕಾರ್ಯಾವಧಿಯನ್ನು ಗಣನೀಯವಾಗಿ ವಿಸ್ತರಿಸಲಾಗಿದೆ. ಇನ್ಮುಂದೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಅಂಗಡಿಗಳು ತೆರೆದಿರಲಿದ್ದು, ಸಾರ್ವಜನಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಅಕ್ಕಿ ಪಡೆದುಕೊಳ್ಳಬಹುದು.
ಇದನ್ನೂ ಓದಿ:
2-3 ತಿಂಗಳಲ್ಲಿ ‘ಇಂದಿರಾ ಕಿಟ್’ ಭಾಗ್ಯ!
ಬಡ ಜನರಿಗೆ ಪೌಷ್ಟಿಕ ಆಹಾರ ಒದಗಿಸುವ ಕಾಂಗ್ರೆಸ್ ಸರ್ಕಾರದ ಮತ್ತೊಂದು ಪ್ರಮುಖ ಭರವಸೆಯಾದ ‘ಇಂದಿರಾ ಕಿಟ್’ ಯೋಜನೆಯ ಟೆಂಡರ್ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ಮುಂದಿನ ಎರಡು ಮೂರು ತಿಂಗಳೊಳಗೆ ರಾಜ್ಯದ ಜನತೆಗೆ ಇಂದಿರಾ ಕಿಟ್ ವಿತರಣೆ ಆರಂಭವಾಗಲಿದೆ ಎಂದು ಸಚಿವ ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.



