June 23, 2026
Tuesday, June 23, 2026
spot_img

ಆಂಧ್ರದ ಶೇಷಾಚಲಂ ಅರಣ್ಯದಲ್ಲಿ ವಿಜಯನಗರ ಸಾಮ್ರಾಜ್ಯದ ಮಹತ್ವದ ಶಾಸನಗಳು ಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಇತಿಹಾಸ ಪ್ರಸಿದ್ಧ ವಿಜಯನಗರ ಸಾಮ್ರಾಜ್ಯದ ಕಾಲದ ಸಾಂಸ್ಕೃತಿಕ ಮತ್ತು ಧಾರ್ಮಿಕ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಮಹತ್ವದ ಶಾಸನಗಳು ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಶೇಷಾಚಲಂ ಅಭಯಾರಣ್ಯದಲ್ಲಿ ಪತ್ತೆಯಾಗಿವೆ. ಶೇಷಾಚಲಂ ಅರಣ್ಯದ ದಟ್ಟ ಅಡವಿಯೊಳಗಿನ ‘ಸದಾಶಿವಕೋನ’ ಎಂಬ ಪವಿತ್ರ ಧಾರ್ಮಿಕ ತಾಣದ ರಾತಿ ಬಂಡೆಗಳ ಮೇಲೆ ಈ ಅಪರೂಪದ ಶಾಸನಗಳನ್ನು ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿ ಇತಿಹಾಸದ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ.

ಕೇಂದ್ರ ಸರ್ಕಾರದ ‘ಭಾರತ್ ಶ್ರೀ’ ಯೋಜನೆ ಅಡಿಯಲ್ಲಿ ದೇಶಾದ್ಯಂತ ಅಳಿವಿನ ಅಂಚಿನಲ್ಲಿರುವ ಶಾಸನಗಳ ಡಿಜಿಟಲೀಕರಣ ಮತ್ತು ಶೋಧ ಕಾರ್ಯದ ಅಂಗವಾಗಿ ಈ ಯಶಸ್ವಿ ಸರ್ವೇ ನಡೆಸಲಾಗಿದೆ.

ಮೂರು ಭಾಷೆಗಳ ಲಿಪಿ ಪತ್ತೆ

ಪುರಾತತ್ವ ಇಲಾಖೆಯ ಮೈಸೂರು ಶಾಖೆಯ ಜಂಟಿ ನಿರ್ದೇಶಕರಾದ ಮುನಿರತ್ನಂ ರೆಡ್ಡಿ ನೇತೃತ್ವದ ಅಧಿಕಾರಿಗಳ ತಂಡವು ಈ ಸಂಶೋಧನೆ ನಡೆಸಿದೆ. ಪತ್ತೆಯಾಗಿರುವ ಶಾಸನಗಳು 16ನೇ ಶತಮಾನದ ವಿಜಯನಗರದ ಪ್ರಸಿದ್ಧ ಅರಸ ಸದಾಶಿವರಾಯನ ಕಾಲಕ್ಕೆ ಸೇರಿವೆ ಎಂದು ಇತಿಹಾಸಕಾರರು ಗುರುತಿಸಿದ್ದಾರೆ. ಅತ್ಯಂತ ಕುತೂಹಲಕಾರಿ ಸಂಗತಿಯೆಂದರೆ, ಈ ಶಾಸನಗಳನ್ನು ಅಂದಿನ ಕಾಲದ ಕನ್ನಡ, ತೆಲುಗು ಮತ್ತು ತಮಿಳು ಮೂರೂ ಭಾಷೆಗಳ ಲಿಪಿಗಳಲ್ಲಿ ಕೆತ್ತಲಾಗಿದೆ.

ಶಾಸನದಲ್ಲಿ ಅಡಗಿರುವ ಮಹತ್ವದ ಮಾಹಿತಿ

ಶಾಸನಗಳ ಪ್ರಕಾರ, ವಿಜಯನಗರದ ಅರಸ ಸದಾಶಿವರಾಯರು ತಮ್ಮ ತೀರ್ಥಯಾತ್ರೆಯ ಸಂದರ್ಭದಲ್ಲಿ ಸ್ವತಃ ಈ ಸದಾಶಿವಕೋನ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಪವಿತ್ರ ತೀರ್ಥದಲ್ಲಿ ಪುಣ್ಯಸ್ನಾನ ಮಾಡಿದ್ದರು. ರಾಜನು ಈ ಪುಣ್ಯಕ್ಷೇತ್ರದಲ್ಲಿ ಶಿವ ದೇವಾಲಯ ಹಾಗೂ ಮಠವನ್ನು ನಿರ್ಮಿಸಿದ್ದ ಉಲ್ಲೇಖವಿದೆ. ಇದರೊಂದಿಗೆ ಗುಡಿಮಲ್ಲಂನ ಪ್ರಸಿದ್ಧ ‘ಶ್ರೀ ಪರಶುರಾಮೇಶ್ವರ ಸ್ವಾಮಿ’ ದೇವಾಲಯದ ಪೂಜೆ, ನೈವೇದ್ಯ ಹಾಗೂ ದೈನಂದಿನ ಧಾರ್ಮಿಕ ಕೈಂಕರ್ಯಗಳ ನಿರ್ವಹಣೆಗಾಗಿ ರಾಜನು ಹಲವು ಹಳ್ಳಿಗಳ ಭೂಮಿಯನ್ನು ದಾನವಾಗಿ ನೀಡಿದ್ದ ಸಂಪೂರ್ಣ ವಿವರಗಳು ಈ ಶಾಸನದಲ್ಲಿ ಕೆತ್ತಲ್ಪಟ್ಟಿವೆ.

ಈ ಶಿಲೆಗಳ ಮೇಲೆ ಧಾರ್ಮಿಕ ಲಿಪಿಯ ಜೊತೆಗೆ, ಪರಮಶಿವನು ಜಟಾಧಾರಿಯಾಗಿ ಉಗ್ರ ರೂಪದಲ್ಲಿ ನೃತ್ಯ ಮಾಡುತ್ತಿರುವ ಅಪರೂಪದ ಆಕೃತಿಯನ್ನು ಸಹ ಕೆತ್ತಲಾಗಿದೆ.

ಇದನ್ನೂ ಓದಿ:

ಪ್ರವಾಸೋದ್ಯಮಕ್ಕೆ ಹೊಸ ವೇದಿಕೆ

ದಟ್ಟ ಅರಣ್ಯದ ಮಧ್ಯೆ ಸಿಕ್ಕಿರುವ ಈ ಶಾಸನಗಳು ವಿಜಯನಗರದ ಅರಸರಿಗೆ ಕರಾವಳಿ ಮತ್ತು ಮಲೆನಾಡಿನ ಗಡಿಯಾಚೆಗೂ ಇದ್ದ ಧಾರ್ಮಿಕ ಔದಾರ್ಯ ಮತ್ತು ಜನಪರ ಕಾಳಜಿಯನ್ನು ಸಾಬೀತುಪಡಿಸುತ್ತವೆ. ತಿರುಪತಿ ಸಂಸದರಾದ ಗುರುಮೂರ್ತಿ ಸಹಯೋಗದೊಂದಿಗೆ ಈ ಸದಾಶಿವಕೋನ ಪ್ರದೇಶವನ್ನು ಐತಿಹಾಸಿಕ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಆಂಧ್ರಪ್ರದೇಶ ಸರ್ಕಾರ ಚಿಂತನೆ ನಡೆಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !