ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಪುಣೆಯ ಲೋಹಗಢ ಕೋಟೆಯಲ್ಲಿ ಸಂಭವಿಸಿದ ಯುವ ಉದ್ಯಮಿಯ ಆಕಸ್ಮಿಕ ಸಾವಿನ ಪ್ರಕರಣಕ್ಕೆ ಭೀಕರ ತಿರುವು ಸಿಕ್ಕಿದೆ. ಸೆಲ್ಫಿ ಅಥವಾ ಫೋಟೋ ತೆಗೆದುಕೊಳ್ಳುವಾಗ ಕಾಲು ಜಾರಿ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಭಾವಿಸಲಾಗಿದ್ದ ಯುವಕನನ್ನು, ಆತನ ಭಾವಿ ಪತ್ನಿ ಹಾಗೂ ಆಕೆಯ ಪ್ರಿಯಕರನೇ ಸೇರಿ 400ಅಡಿ ಆಳದ ಪ್ರಪಾತಕ್ಕೆ ತಳ್ಳಿ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪುಣೆ ಗ್ರಾಮಾಂತರ ಪೊಲೀಸರು ಮೃತನ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಎಂಬುವವರನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ದುರಂತದ ಹಿನ್ನೆಲೆ:
ಮೃತನನ್ನು ಪುಣೆಯ ಪ್ರಸಿದ್ಧ ರಿಯಲ್ ಎಸ್ಟೇಟ್ ಉದ್ಯಮಿ ವಿಶಾಲ್ ಅಗರ್ವಾಲ್ ಪುತ್ರ ಕೇತನ್ ವಿಶಾಲ್ ಅಗರ್ವಾಲ್ ಎಂದು ಗುರುತಿಸಲಾಗಿದೆ. ಕೇತನ್ ಹಾಗೂ ಸಿಯಾ ಗೋಯಲ್ ಇಬ್ಬರಿಗೂ ಪೋಷಕರು ನಿಶ್ಚಯಿಸಿ ಈ ವರ್ಷದ ನವೆಂಬರ್‌ನಲ್ಲಿ ಅದ್ಧೂರಿ ವಿವಾಹ ನೆರವೇರಿಸಲು ಸಿದ್ಧತೆ ನಡೆಸಿದ್ದರು. ಆದರೆ ಸಿಯಾಗೆ ಈ ಮದುವೆ ಇಷ್ಟವಿರಲಿಲ್ಲ. ತಾನು ಪ್ರೀತಿಸುತ್ತಿದ್ದ ಚೇತನ್ ಜೊತೆಗಿನ ಸಂಬಂಧಕ್ಕೆ ಕೇತನ್ ಅಡ್ಡಿಯಾಗಿದ್ದಾನೆಂದು ಭಾವಿಸಿ ಆತನನ್ನು ಮುಗಿಸಲು ಆಕೆ ಸ್ಕೆಚ್ ಹಾಕಿದ್ದಳು.
ಕೊಲೆ ನಡೆದಿದ್ದು ಹೇಗೆ?:
ಜೂನ್ 18 ರಂದು ಸಿಯಾ ತನ್ನ ಹುಟ್ಟುಹಬ್ಬದ ಆಚರಣೆಯ ನೆಪ ಹೂಡಿ ಕೇತನ್‌ನನ್ನು ಲೋಹಗಢ ಕೋಟೆಗೆ ಟ್ರೆಕ್ಕಿಂಗ್‌ಗಾಗಿ ಕರೆತಂದಿದ್ದಳು. ಕೋಟೆಯ ತುತ್ತತುದಿಗೆ ಬಂದಾಗ ಆಕೆ ಮೊದಲೇ ಮಾಡಿಕೊಂಡಿದ್ದ ಪ್ಲಾನ್‌ನಂತೆ ಪ್ರಿಯಕರ ಚೇತನ್‌ನನ್ನು ರಹಸ್ಯವಾಗಿ ಅಲ್ಲಿಗೆ ಕರೆಸಿಕೊಂಡಿದ್ದಳು. ಕೇತನ್ ಕೋಟೆಯ ತುದಿಯಲ್ಲಿ ನಿಂತು ಫೋಟೋ ತೆಗೆದುಕೊಳ್ಳುವಾಗ ಇಬ್ಬರೂ ಸೇರಿ ಆತನನ್ನು ಹಿಂದಿನಿಂದ 400 ಅಡಿ ಆಳದ ಕಂದಕಕ್ಕೆ ತಳ್ಳಿದ್ದರು.
ಇದನ್ನೂ ಓದಿ:
ಪೊಲೀಸರ ಹಾದಿ ತಪ್ಪಿಸಲು ಯತ್ನ:
ಕೇತನ್ ಪ್ರಪಾತಕ್ಕೆ ಬೀಳುತ್ತಿದ್ದಂತೆ ಆರೋಪಿ ಸಿಯಾ, ಕೋಟೆಯ ಮೇಲಿದ್ದ ಜೋರಾದ ಗಾಳಿಯಿಂದಾಗಿ ಕೇತನ್ ಆಯತಪ್ಪಿ ಬಿದ್ದಿದ್ದಾನೆ ಎಂದು ಸ್ಥಳೀಯರಿಗೆ ಹಾಗೂ ಪೊಲೀಸರಿಗೆ ಕಥೆ ಕಟ್ಟಿ ಹಾದಿ ತಪ್ಪಿಸಲು ಯತ್ನಿಸಿದ್ದಳು. ಆದರೆ ಘಟನಾ ಸ್ಥಳದ ಪರಿಶೀಲನೆ ಮತ್ತು ಕೇತನ್ ಪೋಷಕರ ಸಂಶಯದ ಮೇರೆಗೆ ಪೊಲೀಸರು ಸಿಯಾಳ ಮೊಬೈಲ್ ಕರೆಗಳ ತನಿಖೆ ನಡೆಸಿದಾಗ ಚೇತನ್ ಜೊತೆಗಿನ ರಹಸ್ಯ ಸಂಬಂಧ ಮತ್ತು ಕೊಲೆಯ ಸಂಚು ಬಯಲಾಗಿದೆ. ತೀವ್ರ ವಿಚಾರಣೆಯ ನಂತರ ಇಬ್ಬರೂ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.



