July 12, 2026
Sunday, July 12, 2026
spot_img

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಹತ್ವದ ಸಭೆ! ಈಶಾನ್ಯ ಶಿಕ್ಷಕರ ಎಲೆಕ್ಷನ್ ಗೆಲ್ಲಲು ಸೋಮನಾಥ ಪಾಟೀಲ ಪಡೆ ಸಜ್ಜು

ಹೊಸದಿಗಂತ ವರದಿ ಬೀದರ

ಬೀದರ್: ಮುಂಬರುವ ಈಶಾನ್ಯ ಶಿಕ್ಷಕರ ವಿಧಾನ ಪರಿಷತ್ ಸದಸ್ಯರ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಲು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಬೆಳಿಗ್ಗೆ 10:00 ಗಂಟೆಗೆ ಮಹತ್ವದ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌ ಸಾರಥ್ಯದಲ್ಲಿ ನಡೆದ ಈ ಸಭೆಯಲ್ಲಿ ಪಕ್ಷದ ಹಿರಿಯ ನಾಯಕರು, ಶಾಸಕರು ಹಾಗೂ ಪದಾಧಿಕಾರಿಗಳು ಭಾಗವಹಿಸಿ, ಚುನಾವಣಾ ತಂತ್ರಗಾರಿಕೆಯ ಕುರಿತು ಸಮಾಲೋಚನೆ ನಡೆಸಿದರು.

ವಿಧಾನ ಪರಿಷತ್ತಿನ ಸಚೇತಕರಾದ ರವಿಕುಮಾರ್ ಮಾತನಾಡಿ, “ಈಶಾನ್ಯ ಶಿಕ್ಷಕರ ಚುನಾವಣೆ ಅತ್ಯಂತ ಪ್ರಮುಖವಾಗಿದ್ದು, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಂಡು ಅಭ್ಯರ್ಥಿಯ ಪರವಾಗಿ ಶ್ರಮಿಸಬೇಕು” ಎಂದು ಕರೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ, “ವಿಧಾನ ಪರಿಷತ್ ಚುನಾವಣೆಗಳಲ್ಲಿ ಯಾವಾಗಲೂ ಭಾರತೀಯ ಜನತಾ ಪಾರ್ಟಿಯೇ ಗೆಲ್ಲುತ್ತದೆ. ಈ ಇತಿಹಾಸವನ್ನು ಮುಂದುವರಿಸಲು ನಾವೆಲ್ಲರೂ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ತಿಳಿಸಿದರು.

ಶಾಸಕ ಹಾಗೂ ರಾಜ್ಯ ಕಾರ್ಯದರ್ಶಿ ಡಾ. ಶೈಲೇಂದ್ರ ಬೆಲ್ದಾಳೆ ಅವರು ಮಾತನಾಡಿ, “ನಮ್ಮ ಪಕ್ಷದ ಅಭ್ಯರ್ಥಿಯಾದ ಶಶೀಲ್ ನಮೋಶಿ ಶಿಕ್ಷಕರ ಎಲ್ಲಾ ಕುಂದುಕೊರತೆಗಳನ್ನು ನಿವಾರಿಸುವ ಸಮರ್ಥ ನಾಯಕರಾಗಿದ್ದಾರೆ. ಇಂತಹ ಜನಪರ ಅಭ್ಯರ್ಥಿಯನ್ನು ಎಲ್ಲರೂ ಒಗ್ಗೂಡಿ ಗೆಲ್ಲಿಸಬೇಕು” ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಮಾತನಾಡಿ, “ನನ್ನ ಹಿಂದಿನ ಅವಧಿಯಲ್ಲಿ ಶಿಕ್ಷಕರ ಹಿತರಕ್ಷಣೆಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಿ ಅನೇಕ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. ಮುಂದಿನ ಅವಧಿಯಲ್ಲೂ ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡಿ, ಅವರ ಎಲ್ಲಾ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಮುಕ್ತಿ ನೀಡುತ್ತೇನೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಬೋದಿ:

ಈ ಮಹತ್ವದ ರಾಜಕೀಯ ಸಭೆಯಲ್ಲಿ ಮಾಜಿ ಜಿಲ್ಲಾಧ್ಯಕ್ಷ ಶಿವರಾಜ ಗಂದಗೆ, ಶಿವಾನಂದ ಮಂಠಾಳಕರ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಬಾಬುವಾಲಿ, ಬಾಬುರಾವ್ ಕಾರುಬಾರಿ ಉಪಸ್ಥಿತರಿದ್ದರು. ಇವರೊಂದಿಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪೀರಪ್ಪ ಔರಾದೆ, ಕಿರಣ್ ಪಾಟೀಲ್, ಜಿಲ್ಲಾ ಉಪಾಧ್ಯಕ್ಷ ಅಶೋಕ್ ಹೋಕ್ರಾಣೆ, ರಾಜಶೇಖರ ನಾಗಮೂರ್ತಿ, ಗುರುನಾಥ ಜ್ಯಾಂತಿಕರ್ ಹಾಗೂ ಮಾಧ್ಯಮ ಸಂಚಾಲಕರಾದ ಶ್ರೀನಿವಾಸ ಚೌದ್ರಿ ಸೇರಿದಂತೆ ಜಿಲ್ಲೆಯ ಎಲ್ಲಾ ಪ್ರಮುಖ ಪದಾಧಿಕಾರಿಗಳು ಭಾಗವಹಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !