10-15 ತಿಂಗಳಲ್ಲಿ ದ. ಕ. ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರ: ಸಚಿವ ಕೃಷ್ಣ ಬೈರೇಗೌಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಾರ್ಯಾಲಯವನ್ನು ಮುಂದಿನ ಹತ್ತು ಹದಿನೈದು ತಿಂಗಳಲ್ಲಿ ನಗರದ ಪಡೀಲಿನಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ಸ್ಥಳಾಂತರಿಸಲು ಅಗತ್ಯ ಕ್ರಮಗಳನ್ನು ವಹಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಅವರು ಪಡೀಲ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಹಿಂದೆ ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತದಲ್ಲಿ ಇದ್ದಾಗ ೨೦೧೭-೧೮ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ಮಂಜೂರಾತಿ ನೀಡಲಾಗಿದೆ. ಎರಡು ಹಂತಗಳಲ್ಲಿ ಯೋಜನೆಗೆ ಅನುಮೋದನೆ ನೀಡಬೇಕಾಗಿತ್ತು. ಎರಡನೇ ಹಂತಕ್ಕೆ ಅನುಮೋದನೆ ಸಿಕ್ಕಿಲ್ಲ. ನಮ್ಮ ಸರಕಾರ ಅದಕ್ಕೆ ಅನುಮೋದನೆ ನೀಡಲಿದೆ ಎಂದು ಕಂದಾಯ ಸಚಿವರು ಹೇಳಿದರು.

ಮೊದಲ ಹಂತದಲ್ಲಿ ಜಿಲ್ಲಾಧಿಕಾರಿ ಕಾರ್ಯಾಲಯವನ್ನು ಸ್ಥಳಾಂತರಿಸಲಾಗುವುದು. ಮುಂದೆ ಹಂತ ಹಂತವಾಗಿ ಇತರ ಕಚೇರಿಗಳನ್ನು ಪಡೀಲಿನ ಕಾರ್ಯಾಲಯಗಳ ಸಂಕೀರ್ಣಕ್ಕೆ ಸ್ಥಳಾಂತರಿಸಲಾಗುವುದು. ಅದಕ್ಕೆ ತಕ್ಕಂತೆ ಯೋಜನಾ ವೆಚ್ಚವನ್ನು ಪುನರ್ ನಿಗದಿ ಪಡಿಸಿ ಮಂಡಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣವನ್ನು ಸಂಪೂರ್ಣಗೊಳಿಸಿ ಜನತೆಗೆ ಅನುಕೂಲ ಮಾಡಿಕೊಡುವುದು ಸರಕಾರದ ಜವಾಬ್ದಾರಿಯಾಗಿದೆ. ಅದರ ನಿರ್ವಹಣೆಯಲ್ಲಿ ಸರಕಾರ ಹಿಂದೆ ಬೀಳದು ಎಂದು ತಿಳಿಸಿದ ಕಂದಾಯ ಸಚಿವರು, ಕಂದಾಯ ಇಲಾಖೆಯ ತಳಮಟ್ಟದ ಕಚೇರಿಗಳಿಗೆ ಭೇಟಿ ನೀಡಿ ಇಲಾಖೆಯ ಕಾರ್ಯ ನಿರ್ವಹಣೆಯ ಸತ್ಯದರ್ಶನ ಪಡೆಯಲು ಬಂದಿರುವುದಾಗಿ ನುಡಿದರು.

ಬಳಿಕ ಸಚಿವರು ಕಡಲ್ಕೊರೆತದಿಂದ ತೊಂದರೆಗೊಳಗಾದ ಸೋಮೇಶ್ವರ ಗ್ರಾಮದ ಬಟ್ಟಂಪಾಡಿ ಪ್ರದೇಶಕ್ಕೆ ಭೇಟಿ ನೀಡಿದರು. ಸೋಮೇಶ್ವರ ಪುರಸಭಾ ಕಾರ್ಯಾಲಯ, ನಾಟೆಕಲ್ಲಿನಲ್ಲಿ ಇರುವ ಉಳ್ಳಾಲ ತಾಲೂಕು ಕಚೇರಿ, ಮಕ್ಕಚ್ಚೇರಿಯ ಪ್ರಾಥಮಿಕ ಶಾಲೆ, ಮಂಗಳೂರು ತಾಲೂಕು ಕಚೇರಿ, ಉಪ ನೋಂದಣಾಕಾರಿ ಕಚೇರಿಗಳಿಗೆ ಕಂದಾಯ ಸಚಿವರು ಭೇಟಿ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!