2022ರಲ್ಲಿ ಒಟ್ಟಾರೆ 70 ಬಿಲಿಯನ್‌ ಡಾಲರ್‌ ಕುಸಿದಿದೆ ಭಾರತದ ವಿದೇಶಿ ವಿನಿಮಯ ಸಂಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಹಣದುಬ್ಬರ ಏರಿಳಿತ, ರುಪಾಯಿ ಮೌಲ್ಯ ಕುಸಿತದ ನಡುವೆ ಡಿಸೆಂಬರ್‌ 30 ರಂದು ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಮಯ ಸಂಗ್ರಹವು 44 ಮಿಲಿಯನ್‌ ಡಾಲರ್‌ ಏರಿಕೆಯಾಗಿ 562.85 ಶತಕೋಟಿ ಡಾಲರ್‌ ಗೆ ತಲುಪಿದೆ. ಆದರೆ 2022ರಲ್ಲಿ ಒಟ್ಟಾರೆಯಾಗಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 70.1 ಬಿಲಿಯನ್‌ ಡಾಲರ್‌ ಗಳಷ್ಟು ಕುಸಿದಿದೆ ಎಂದು ಆರ್‌ಬಿಐ ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿ ಅಂಶಗಳು ತೋರಿಸಿವೆ.

ರುಪಾಯಿ ಮೌಲ್ಯದ ಚಂಚಲತೆ ನಿಯಂತ್ರಿಸಲು ಕರೆನ್ಸಿ ಮಾರುಕಟ್ಟೆಯಲ್ಲಿ ಆರ್‌ಬಿಐ ಕ್ರಮಗಳಿಂದಾಗಿ 2022 ರಲ್ಲಿ ಫಾರೆಕ್ಸ್ ಮೀಸಲು ಕುಸಿತ ಕಂಡಿದೆ. ಸೆಪ್ಟೆಂಬರ್‌ವರೆಗೆ ಆರ್‌ಬಿಐ ನಿವ್ವಳ 33.42 ಬಿಲಿಯನ್ ಡಾಲರ್‌ಗಳನ್ನು ಮಾರಾಟ ಮಾಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಈ ಹಿಂದೆ ಹೇಳಿದ್ದರು.

RBI ಅಂಕಿಅಂಶಗಳ ಪ್ರಕಾರ, ಡಿಸೆಂಬರ್ 30 ಕ್ಕೆ ಕೊನೆಗೊಂಡ ವಾರದಲ್ಲಿ ಸೆಂಟ್ರಲ್ ಬ್ಯಾಂಕಿನ ಚಿನ್ನದ ಸಂಗ್ರಹವು 354 ಮಿಲಿಯನ್ ಡಾಲರ್ ಏರಿಕೆಯಾಗಿ 41.32 ಶತಕೋಟಿ ಡಾಲರ್‌ ಗೆ ತಲುಪಿದೆ.

ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ, ರೂಪಾಯಿಯು ಸಾರ್ವಕಾಲಿಕ ಕನಿಷ್ಠಮಟ್ಟ 82.85 ಕ್ಕೆ ಇಳಿದು ಸುಮಾರು 12 ಪ್ರತಿಶತದಷ್ಟು ಕುಸಿದಿದೆ. ಜನವರಿ 12, 2022 ರಂದು ದೇಶೀಯ ಕರೆನ್ಸಿಯ ಮೌಲ್ಯವು ಒಂದು ಡಾಲರ್‌ಗೆ 73.77 ರುಪಾಯಿಗಳಷ್ಟಿತ್ತು.

ಮುಖ್ಯವಾಗಿ ಅಮೆರಿಕದ ಕರೆನ್ಸಿ ಬಲವರ್ಧನೆ, ಹೂಡಿಕೆದಾರರಲ್ಲಿ ಅಪಾಯ-ವಿರೋಧಿ ಮನೋಭಾವ ಮತ್ತು ಉಕ್ರೇನ್‌ನಲ್ಲಿನ ಸಂಘರ್ಷ, ತೈಲಬೆಲೆ ಏರಿಳಿತದಂತಹ ಜಾಗತಿಕ ವಿದ್ಯಮಾನಗಳು ರುಪಾಯಿ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!