ಬೀದಿ ಬದಿ ವ್ಯಾಪಾರಿಗಳ ಹೊಟ್ಟೆ ತುಂಬಿಸುತ್ತಿದೆ ಕನ್ನಡ ಸಾಹಿತ್ಯ ಸಮ್ಮೇಳನ: ಇಲ್ಲಿ ಎಲ್ಲವೂ ಲಭ್ಯ

-ಮಹಾಂತೇಶ ಕಣವಿ

ಪ್ರತಿದಿನಕ್ಕಿಂತ ವಿಶೇಷ ಹಬ್ಬ, ಹರಿದಿನ, ಜಾತ್ರೆಗಳಲ್ಲಿ ಮಾತ್ರ ಒಂದೆರೆಡು ಕಾಸು ಹೆಚ್ಚಾಗಿ ಬಂದರೆ ಮಕ್ಕಳ ವಿದ್ಯಾಭ್ಯಾಸಕ್ಕೋ ಮನೆ ಖರ್ಚು ನೀಗುತ್ತದೆ ಎಂದು ಹಂಬಲಿಸುವ ಬೀದಿ-ಬದಿ ವ್ಯಾಪಾರಿಗಳಿಗೆ ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನ ಅವರ ಆಸೆಗೆ ದಾರಿದೀಪವಾಗಿದೆ. ಎರಡು ದಶಕದಿಂದ ಈಚೆಗೆ ಕನ್ನಡ ಸಾಹಿತ್ಯ ಸಮ್ಮೇಳನ ಜಾತ್ರೆ, ಹಬ್ಬ, ಸಂತೆ ಹೀಗೆ ಹಲವು ನಾಮಾಂಕಿತ ಪಡೆದಿವೆ. ಸಮಯ ಕಳೆದಂತೆ ಸಮ್ಮೇಳನಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಿದೆ ವಿನಃ ಕಡಿಮೆ ಆಗಿಲ್ಲ. ಬೈದುಕೊಂಡಾದರೂ, ಭಾಗವಹಿಸುವವರೆಗೇನೂ ಬರವಿಲ್ಲ.! ಇಂತಹ ಸಮ್ಮೇಳನದಲ್ಲಿ ಸವಣೂರು ಖಾರ, ಧಾರವಾಡ ಪೇಢಾ, ಗೋಕಾಕ್ ಕರದಂಟು, ಬೆಳಗಾವಿ ಕುಂದಾದಿಂದ ಹಿಡಿದು ಬಟ್ಟೆಗಳು, ಉಪ್ಪಿನಕಾಯಿ, ಬಲೂನ್ ಮಾರುವವರು ಗಮನಸೆಳೆದಿದ್ದಾರೆ.

ಶೇಂಗಾ, ಕಡಲೆ, ಕಬ್ಬಿನ ಹಾಲು, ಎಳೆನೀರು, ಹಪ್ಪಳ, ಸಂಡಿಗೆ, ಐಸ್ ಕ್ರೀಂ, ಪೀಪಿ, ಚುರುಮರಿ, ಮಿರ್ಚಿ-ಭಜ್ಜಿ, ಪಾನಿಪೂರಿ, ಗಿರಮಿಟ್ಟ ಹೀಗೆ ನಿತ್ಯವೂ ದುಡಿದ ಹೊಟ್ಟೆ ಹೊರೆಯುವ ವ್ಯಾಪಾರಿಗಳಿಗೆ ಮೂರು ದಿನಗಳು ಭರ್ಜರಿ ವ್ಯಾಪಾರ ಹಾಗೂ ತುಸು ನೆಮ್ಮದಿಯ ದಿನಗಳು.
ಇನ್ನು ಭಾಗವಹಿಸುವರರೂ ಅಷ್ಟೇ. ಎಲ್ಲರೂ ಸಾಹಿತ್ಯಾಸಕ್ತರೇ ಬರಲ್ಲ. ಎಲ್ಲ ಗೋಷ್ಠಿ ಗಂಭೀರ ಪರಿಗಣಿಸುವ ನಿರೀಕ್ಷೆಯೂ ತಪ್ಪು. ಆದರೆ, ಕುತೂಹಲದಿಂದ ಬಂದವರು ಗೊತ್ತಿರುವ ಭಾಷಣ, ಪರಿಚತರ ಕವಿತೆ ಆಲಿಸಿ, ಪುಸ್ತಕ ಮಳಿಗೆಯಲ್ಲಿ ಪುಟ ತಿರುಗಿಸಿ ಸುತ್ತಾಡುವವರೇ ಹೆಚ್ಚು.

ಯಾವ ಗೋಷ್ಠಿ ಆಲಿಸದೆ, ಮಧ್ಯಾಹ್ನ ಊಟ, ಸಂಜೆ ಮಂಡಕ್ಕಿ ಜತೆ ಮಿರ್ಚಿ ಸವಿದು, ಅಲ್ಲಿಲ್ಲಿ ತಿರುಗಾಡಿ, ಇಷ್ಟದ ವಸ್ತು ಖರೀದಿಸಿ, ಮನೆಯತ್ತ ಕಾಲಿಗೆ ಬುದ್ಧಿ ಹೇಳುತ್ತಾರೆ. ಹೀಗೆಂದು ಗೋಷ್ಠಿಗಳನ್ನು ಕೇಳುವ ಹಾಗೂ ಪುಸ್ತಕ ಕೊಳ್ಳುವವರನ್ನೂ ಅಲ್ಲಗಳೆಯುವಂತಿಲ್ಲ.
ಗೆಳೆಯರು-ಗೆಳತಿಯರು ಸಿಗುವರೆಂಬ ಕಾರಣಕ್ಕೆ ಬಂದು ಒಂದಿಷ್ಟು ಹರಟೆ ಹೊಡೆಯುತ್ತಾರೆ. ಹೈಸ್ಕೂಲ್ ಸಹಪಾಠಿಗಳು ಸಿಕ್ಕಿರುವ ಉದಾಹರಣೆಗಳಿಗೆ ಕೊರತೆ ಇಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!