ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಬಳಸುತ್ತಿರುವಿರಾ? ಹಾಗಾದರೆ, ಹುಷಾರಾಗಿರಿ! ಏಕೆಂದರೆ ಸ್ವಲ್ಪ ಎಚ್ಚರ ತಪ್ಪಿದರೂ ದೃಷ್ಟಿ ಕಳೆದುಕೊಳ್ಳುವ ಅಪಾಯವಿದೆ. ಇತ್ತೀಚೆಗಷ್ಟೇ ಅಮೆರಿಕದ ಫ್ಲೋರಿಡಾ ಮೂಲದ ವ್ಯಕ್ತಿಯೊಬ್ಬ ತನ್ನ ನಿರ್ಲಕ್ಷ್ಯದಿಂದ ದೃಷ್ಟಿ ಕಳೆದುಕೊಂಡಿದ್ದಾನೆ.
ಹಾನಿಕಾರಕ ಬ್ಯಾಕ್ಟೀರಿಯಾಗಳು ಕಣ್ಣನ್ನು ತಿಂದು ಆತನನ್ನು ಕುರುಡನನ್ನಾಗಿ ಮಾಡಿವೆ. ಫ್ಲೋರಿಡಾದ 21 ವರ್ಷದ ಮೈಕೆಲ್ ಕ್ರುಮೋಜ್ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದು, ಕಾಂಟ್ಯಾಕ್ಟ್ ಲೆನ್ಸ್ ಬಳಸುತ್ತಿದ್ದರು. ಮಲಗುವ ಮುನ್ನ ಕಾಂಟ್ಯಾಕ್ಟ್ ಲೆನ್ಸ್ ತೆಗೆಯದ ಪರಿಣಾಮವಾಗಿ ಕಣ್ಣಿಗೆ ಅಕಾಂತ್ ಅಮೀಬಾ ಕೆರಟೈಟಿಸ್ ಸೋಂಕು ತಗುಲಿದೆ. ಬ್ಯಾಕ್ಟೀರಿಯಾವು ಆತನ ಎಡಗಣ್ಣನ್ನು 40 ನಿಮಿಷಗಳಲ್ಲಿ ತಿಂದುಹಾಕಿದೆ. ಅಂದರೆ, ಬ್ಯಾಕ್ಟೀರಿಯಾವು ದೃಷ್ಟಿಗೆ ಕಾರಣವಾದ ಕಾರ್ನಿಯಾದ ಭಾಗವನ್ನು ಸಂಪೂರ್ಣ ತಿಂದಿದೆ.
ಏನೂ ಕಾಣದೆ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿದಾಗ ತಿಳಿದದ್ದು ವೈದ್ಯರು ತಿಳಿಸಿದ ಬ್ಯಾಕ್ಟೀರಿಯಾದ ಬಗ್ಗೆ. ತೀವ್ರ ನೋವಿನಿಂದ ಬಳಲುತ್ತಿರುವ ಆತನಿಗೆ ಕಾರ್ನಿಯಲ್ ಶಸ್ತ್ರಚಿಕಿತ್ಸೆಯನ್ನು ಮಾಡಬೇಕು. ಪೂರ್ಣ ದೃಷ್ಟಿ ಬರುತ್ತದೆ ಎಂದು ಹೇಳಲಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರಲ್ಲಿ ಈ ಸಮಸ್ಯೆ ಬರುವ ಸಾಧ್ಯತೆಗಳಿವೆ ಎನ್ನುತ್ತಾರೆ ವೈದ್ಯರು.