ಅಂಕೋಲಾದಲ್ಲಿ ಧಾನ್ಯ ಲಕ್ಷ್ಮೀಯನ್ನು ಮನೆ ತುಂಬಿಸಿಕೊಂಡ ಗ್ರಾಮಸ್ಥರು

ಹೊಸದಿಗಂತ ವರದಿ, ಅಂಕೋಲಾ:

ಕೃಷಿಕ ಕುಟುಂಬಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಅಂಕೋಲಾ ತಾಲೂಕಿನಲ್ಲಿ ನವರಾತ್ರಿ ಸಂದರ್ಭದಲ್ಲಿ ಹೊಸ್ತು ಹಬ್ಬ ಆಚರಿಸಿ ಧಾನ್ಯ ಲಕ್ಷ್ಮೀಯನ್ನು ಮನೆ ತುಂಬಿಸಿಕೊಳ್ಳುವ ಸಂಪ್ರದಾಯವನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸಲಾಗುತ್ತದೆ.
ನವರಾತ್ರಿಯ ಒಂಬತ್ತು ದಿನಗಳಲ್ಲಿ ಕೃಷಿಕ ರೈತಾಬಿ ಜನರಷ್ಟೇ ಅಲ್ಲದೇ ಇತರರೂ ಭೂಮಿತಾಯಿ ಪೂಜೆ ನಡೆಸಿ ಭತ್ತದ ಕದಿರನ್ನು ಕೊಯ್ದು ಪೂಜೆ ಮಾಡಿ ಮನೆ ತುಂಬಿಸಿಕೊಳ್ಳುವ ಮೂಲಕ ಧಾನ್ಯ ಲಕ್ಷ್ಮಿಯನ್ನು ಆರಾಧಿಸುತ್ತಾರೆ.
ಮನೆಯ ಹಿರಿಯರು ಮಕ್ಕಳು ಸೇರಿ ಪೂಜಾ ಸಾಮಗ್ರಿಗಳೊಂದಿಗೆ ಹೊಲಕ್ಕೆ ತೆರಳಿ ಪೈರಿಗೆ ಪೂಜೆ ಸಲ್ಲಿಸಿ ಭತ್ತದ ಕದಿರನ್ನು ಕೊಯ್ದು ತಲೆಯ ಮೇಲೆ ಹೊತ್ತು ತಂದು ಮನೆಯ ಎದುರು ತುಳಸಿ ಕಟ್ಟೆ ಎದುರು ಆರತಿ ಬೆಳಗಿಸಿ, ದೇವರ ಕೋಣೆಯಲ್ಲಿ ಇಟ್ಟು ಪೂಜಿಸುತ್ತಾರೆ.
ಹೀಗೆ ಪೂಜಿಸಿದ ಕದಿರನ್ನು ಮಾವಿನ ಎಲೆಯಲ್ಲಿ ವಿವಿಧ ಹೂವುಗಳೊಂದಿಗೆ ನಾರು ಬಳ್ಳಿಯಿಂದ ಬಿಗಿದು ದೇವರ ಕೋಣೆಯ ಬಾಗಿಲು, ತುಳಸಿ ಕಟ್ಟೆ,
ಕೃಷಿ ಸಾಧನಗಳು, ಧಾನ್ಯ ಸಂಗ್ರಹ ಮೊದಲಾದ ಕಡೆಗಳಲ್ಲಿ ಕಟ್ಟುವ ಮೂಲಕ ಸಮೃದ್ಧಿಗಾಗಿ ಪ್ರಾರ್ಥಿಸಲಾಗುತ್ತದೆ.
ಸ್ವಂತ ಹೊಲ ಗದ್ದೆ ಇಲ್ಲದವರು ಸಮೀಪದ ಪರಿಚಯಸ್ಥರ ಗದ್ದೆಗಳಿಂದ ಕದಿರನ್ನು ತಂದು ಪೂಜಿಸುತ್ತಾರೆ.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗ್ರಾಮ ದೇವರುಗಳ ದೇವಾಲಯದಲ್ಲಿ, ಕುಲದೇವತಾ ಸ್ಥಾನಗಳಲ್ಲಿ ಹೊಸ್ತು ಹಬ್ಬ ನಡೆಯುವ ಸಂದರ್ಭದಲ್ಲಿ ಆ ಭಾಗದ ಜನರು ಹೊಸ್ತು ಆಚರಿಸುತ್ತಾರೆ.
ದೇವಸ್ಥಾನದ ಅರ್ಚಕರು, ಗುನಗರೊಂದಿಗೆ ಸಾಮೂಹಿಕವಾಗಿ ತೆರಳಿ ಭತ್ತದ ಪೈರನ್ನು ಪೂಜಿಸಿ ತರಲಾಗುತ್ತದೆ.
ಹಲವಾರು ಕಡೆಗಳಲ್ಲಿ ಹೊಸ್ತಿನ ಸಂದರ್ಭದಲ್ಲಿ ಗ್ರಾಮ ದೇವರ ಕಳಸದ ಮೆರವಣಿಗೆ ನಡೆಯುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!