ನಾಳೆ ಬಿಜೆಪಿ ಅಭ್ಯರ್ಥಿಗಳ ಪರ ಕಿಚ್ಚ ಸುದೀಪ್ ಪ್ರಚಾರ: ಐದು ಕ್ಷೇತ್ರಗಳಲ್ಲಿ ರೋಡ್ ಶೋ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆ ವೇಳೆ ಸಾಂಕೇತಿಕವಾಗಿ ಭಾಗಿಯಾಗಿ ಬೆಂಬಲ ಸೂಚಿಸಿ ಪ್ರಚಾರ ನಡೆಸಿದ್ದ ಚಿತ್ರನಟ ಸುದೀಪ್ ಬೊಮ್ಮಾಯಿ ಹಾಗೂ ಅವರು ಸೂಚಿಸುವ ಅಭ್ಯರ್ಥಿಗಳ ಪರವಾಗಿ ನಟ ಕಿಚ್ಚ ಸುದೀಪ್ ನಾಳೆ ಅಧಿಕೃತವಾಗಿ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ.

ನಾಳೆ ಮೊಳಕಾಲ್ಮೂರಿನ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ರೋಡ್ ಶೋ ಮೂಲಕ ಮತಯಾಚನೆ ಮಾಡಲಿರುವ ಸುದೀಪ್, ಜಗಳೂರು ಬಿಜೆಪಿ ಅಭ್ಯರ್ಥಿ ಪರ ಸುದೀಪ್ ಪ್ರಚಾರ ನಡೆಸಿ, ಮಾಯಕೊಂಡ ಬಿಜೆಪಿ ಅಭ್ಯರ್ಥಿ ಪರ ಮತ ಯಾಚಿಸಲಿದ್ದಾರೆ. ದಾವಣಗೆರೆ ಉತ್ತರ ಮತ್ತು ದಕ್ಷಿಣ ಅಭ್ಯರ್ಥಿಗಳ ಪರ ಪ್ರಚಾರದ ಬಳಿಕ ಸಂಡೂರು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯ ನಡೆಸಲಿದ್ದಾರೆ. ನಾಳೆ ಒಂದೇ ದಿನದಲ್ಲಿ ಒಟ್ಟು ಐದು ಕಡೆ ರೋಡ್ ಶೋ ಮೂಲಕ ಕ್ಯಾಂಪೇನ್ ಮಾಡಲಿದ್ದಾರೆ.

ಬುಧವಾರ ಬೆಳಿಗ್ಗೆ 10.55 ರಿಂದ 11.40 ರವರೆಗೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ ನಟ ಸುದೀಪ್ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಎಸ್. ತಿಪ್ಪೇಸ್ವಾಮಿ ಪರ ಮತಯಾಚನೆ ಮಾಡಲಿದ್ದಾರೆ. ನಂತರ ದಾವಣಗೆರೆ ಜಿಲ್ಲೆ ಜಗಳೂರಿಗೆ ತೆರಳಲಿರುವ ಅವರು ಮಧ್ಯಾಹ್ನ 12.30 ರಿಂದ 1.15 ರವರೆಗೆ ಮೂರು ಕಿಲೋಮೀಟರ್ ರೋಡ್ ಶೋ ನಡೆಸಲಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ರಾಘವೇಂದ್ರ ಪರ ಮತಯಾಚನೆ ಮಾಡಲಿದ್ದಾರೆ.

ಮಾಯಕೊಂಡ ಕ್ಷೇತ್ರಕ್ಕೆ ತೆರಳಲಿರುವ ಸುದೀಪ್ ಮಾಯಕೊಂಡ ಸರ್ಕಾರಿ ಕಾಲೇಜು ಮೈದಾನದಲ್ಲಿ ಮಧ್ಯಾಹ್ನ 3.10 ರಿಂದ 3.50ರವರೆಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಿಜೆಪಿ ಅಭ್ಯರ್ಥಿ ಬಸವರಾಜ ನಾಯ್ಕ್ ಪರ ಪ್ರಚಾರ ನಡೆಸಲಿದ್ದಾರೆ. ನಂತರ ದಾವಣಗೆರೆಗೆ ತೆರಳಲಿರುವ ಸುದೀಪ್ ಸಂಜೆ 4.20 ರಿಂದ 5ರವರೆಗೆ ರೋಡ್ ಶೋ ನಡೆಸಲಿದ್ದಾರೆ. ದಾವಣಗೆರೆ ಉತ್ತರ ಕ್ಷೇತ್ರದ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಬಿ.ಜಿ. ಅಜಯ್ ಕುಮಾರ್ ಪರ ಮತ ಯಾಚಿಸಲಿದ್ದಾರೆ. ದಾವಣಗೆರೆ ಪ್ರಚಾರ ಮುಗಿಸಿ ವಿಜಯನಗರ ಜಿಲ್ಲೆಗೆ ತೆರಳಲಿರುವ ಹೆಬ್ಬುಲಿ ಸುದೀಪ್​, ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ರೋಡ್ ಶೋ ನಡೆಸಿ ಪಕ್ಷದ ಅಭ್ಯರ್ಥಿ ಶಿಲ್ಪ ರಾಘವೇಂದ್ರ ಪರ ಮತಬೇಟೆ ನಡೆಸಲಿದ್ದಾರೆ.

ಪಕ್ಷದ ವತಿಯಿಂದ ನಟ ಕಿಚ್ಚ ಸುದೀಪ್ ಗೆ ಹೆಲಿಕಾಪ್ಟರ್ ವ್ಯವಸ್ಥೆ ಕಲ್ಪಿಸಲಾಗಿದೆ. ಖಾಸಗಿ ಹೆಲಿಕಾಪ್ಟರ್ ಬುಕ್ ಮಾಡಿರುವ ಬಿಜೆಪಿ ಇಡೀ ದಿನ ಸುದೀಪ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!