ಕೊಡಗಿನಲ್ಲಿ ಅಲ್ಪಸಂಖ್ಯಾತರ ಮತಗಳೇ ನಿರ್ಣಾಯಕ: ಇಸಾಕ್ ಖಾನ್

ಹೊಸ ದಿಗಂತ ವರದಿ , ಮಡಿಕೇರಿ:

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೊಡಗಿನ ಎರಡು ಕ್ಷೇತ್ರಗಳಲ್ಲಿಯೂ ಅಲ್ಪಸಂಖ್ಯಾತರ ಮತಗಳು ಗೆಲುವಿನ ಅಭ್ಯರ್ಥಿಯನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವುದು ಖಚಿತವೆಂದು ಜಾತ್ಯತೀತ ಜನತಾ ದಳದ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಖ್ ಖಾನ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತಾರೂಢ ಬಿಜೆಪಿಯು ಪ್ರತಿಯೊಂದು ವಿಚಾರವನ್ನು ಕೋಮು ಭಾವನೆಯ ದೃಷ್ಟಿಕೋನದಿಂದ ನೋಡುತ್ತದೆ. ಹಿಂದೂ ಮತ್ತು ಮುಸ್ಲಿಂ ಸಮುದಾಯದ ನಡುವಿನ ಸೌಹಾರ್ದತೆಯನ್ನು ಕದಡಿ ರಾಜಕೀಯ ಮಾಡಲು ಯತ್ನಿಸುತ್ತಿದೆ ಎಂದು ಟೀಕಿಸಿದರು.
ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕಾಂಗ್ರೆಸ್ ನಡೆದುಕೊಂಡ ರೀತಿಯೇ ಬಿಜೆಪಿ ಅಧಿಕಾರಕ್ಕೇರಲು ಕಾರಣವಾಯಿತು. ಅಲ್ಪಸಂಖ್ಯಾತರಿಗೆ ರಾಜಕೀಯ ಸ್ಥಾನಮಾನ ನೀಡಿದ ಒಂದು ಪಕ್ಷವಿದ್ದರೆ ಅದು ಜಾತ್ಯತೀತ ಜನತಾದಳ ಮಾತ್ರ. ಕಳೆದ ಹಲವು ದಶಕಗಳಿಂದ ಅಲ್ಪಸಂಖ್ಯಾತರ ಓಲೈಕೆಯ ರಾಜಕಾರಣ ಮಾಡಿಕೊಂಡು ಬಂದಿರುವ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರಿಗೆ ನೀಡಿದ ಕೊಡುಗೆಯಾದರೂ ಏನು ಎಂದು ಪ್ರಶ್ನಿಸಿದರು.
ಪ್ರಸ್ತುತ ಕಾಂಗ್ರೆಸ್ ಪಕ್ಷ ವೀರಾಜಪೇಟೆ ಕ್ಷೇತ್ರದಿಂದ ಎ.ಎಸ್.ಪೊನ್ನಣ್ಣ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಮುಂದಾಗಿದ್ದು, ಎಲ್ಲಾ ಅಲ್ಪಸಂಖ್ಯಾತರು ಅವರನ್ನು ಬೆಂಬಲಿಸುತ್ತಾರೆ ಎನ್ನುವ ಭ್ರಮೆಯಲ್ಲಿದೆ. ಆದರೆ ಇಂದು ಮತದಾರರು ಪ್ರಜ್ಞಾವಂತರಾಗಿದ್ದಾರೆ. ಈ ಕ್ಷೇತ್ರದಲ್ಲಿ ಅಲಸಂಖ್ಯಾತರೂ ಸೇರಿದಂತೆ ಎಲ್ಲರ ಬೆಂಬಲದೊಂದಿಗೆ ಜೆಡಿಎಸ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜನವರಿಯಲ್ಲಿ ಸಮಾವೇಶ
ಮುಂದಿನ ಜನವರಿಯಲ್ಲಿ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಅಲ್ಪಸಂಖ್ಯಾತರ ಬೃಹತ್ ಸಮಾವೇಶವನ್ನು ಆಯೋಜಿಸಲಾಗುತ್ತದೆ. ಇದರಲ್ಲಿ 25 ಸಾವಿರಕ್ಕೂ ಹೆಚ್ಚಿನ ಅಲ್ಪಸಂಖ್ಯಾತರು ಪಾಲ್ಗೊಳ್ಳಲಿದ್ದಾರೆ. ಸಮಾವೇಶದಲ್ಲಿ ಪಕ್ಷದ ಪ್ರಮುಖರಾದ ಹೆಚ್.ಡಿ.ಕುಮಾರಸ್ವಾಮಿ, ಸಿ.ಎಂ.ಇಬ್ರಾಹಿಂ ಲಭ್ಯತೆಯನ್ನು ಗಮನಿಸಿಕೊಂಡು ಸಮಾವೇಶದ ದಿನಾಂಕ ನಿಗದಿಯಾಗಲಿದೆ ಎಂದರು.
ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎ.ಮನ್ಸೂರ್ ಆಲಿ ಮಾತನಾಡಿದರು.
ಜಿಲ್ಲಾ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಾಶಿರ್ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಕೇವಲ ಅಲ್ಪಸಂಖ್ಯಾತರನ್ನಷ್ಟೆ ಅಲ್ಲ ಎಲ್ಲಾ ಸಮೂಹಗಳ ಬೆಂಬಲದೊಂದಿಗೆ ಸ್ಪರ್ಧಿಸಲಿದೆ. ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದ ಸಂದರ್ಭ ಪೊನ್ನಂಪೇಟೆ ತಾಲೂಕು ರಚನೆಗೆ ಅವಕಾಶ ಮಾಡಿಕೊಟ್ಟಿದ್ದಲ್ಲದೆ, ಹಲವು ಜನಪರ ಕಾರ್ಯಗಳನ್ನು ನಡೆಸಿದ್ದಾರೆ ಎಂದರು.
ಜೆಡಿಎಸ್ ಹಿರಿಯ ಉಪಾಧ್ಯಕ್ಷ ಪಿ.ಎ.ಯೂಸುಫ್ ಕೊಂಡಂಗೇರಿ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಕುಶಾಲನಗರ ಘಟಕದ ಅಧ್ಯಕ್ಷ ಎ.ಶಬ್ಬೀರ್ ಹಾಗೂ ಜಿಲ್ಲಾ ವಕ್ತಾರ ಜಿನಾಸ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!