ಹೊಸದಿಗಂತ ವರದಿ ಮಡಿಕೇರಿ:
ಇಬ್ಬರ ನಡುವೆ ಉಂಟಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ ಪರಿಣಾಮ ಓರ್ವನಿಗೆ ಗುಂಡಿಕ್ಕಿದ ಘಟನೆ ಭಾನುವಾರ ತಡರಾತ್ರಿ ಕುಶಾಲನಗರದಲ್ಲಿ ನಡೆದಿದೆ.
ಘಟನೆಯಲ್ಲಿ ಕಾಲಿಗೆ ಗುಂಡು ತಗುಲಿ ಗಾಯಗೊಂಡ ಶಶಿಕುಮಾರ್ ಅಲಿಯಾಸ್ ಎಂಎಲ್ಎ ಶಶಿ ಎಂಬವರನ್ನು ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದ್ದು,ಗುಂಡಿಕ್ಕಿದ ಆರೋಪಿ ಅನುದೀಪ್ (ಡುಮ್ಮಿ) ಎಂಬವರ ವಿರುದ್ಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಶಾಲನಗರದ ಗುಮ್ಮನಕೊಲ್ಲಿಯ ಚೌಡೇಶ್ವರಿ ಬಡಾವಣೆಯಲ್ಲಿ ಭಾನುವಾರ ರಾತ್ರಿ ಎಣ್ಣೆಪಾರ್ಟಿ ನಡೆದಿದ್ದು, ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಅನುದೀಪ್ ಹಾಗೂ ಶಶಿಕುಮಾರ್ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ. ಇದು ವಿಕೋಪಕ್ಕೆ ತಿರುಗಿದಾಗ ಶಶಿಕುಮಾರ್ ಹೋಗಿ ಕಾರಿನಲ್ಲಿ ಕುಳಿತಿದ್ದು, ಆಕ್ರೋಶಗೊಂಡ ಅನುದೀಪಗ ಗುಂಡು ಹಾರಿಸಿದ್ದಾರೆ. ಅದೃಷ್ಟವಶಾತ್ ಗುಂಡು ಶಶಿಕುಮಾರ್ ಕಾಲಿಗೆ ತಗುಲಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕುಶಾಲನಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮೈಸೂರಿಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಕುಶಾಲನಗರ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.