ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮದ್ದೂರು ತಾಲೂಕಿನ ಗೆಜ್ಜಲಗೆರೆ ಮನ್ ಮುಲ್ ಒಕ್ಕೂಟದ ರಾಸಾಯನಿಕ ಮಿಶ್ರಿತ ನೀರು ಕೆರೆಗೆ ಹರಿದ ಪರಿಣಾಮ ಲಕ್ಷಾಂತರ ರೂ ಮೌಲ್ಯದ ಮೀನುಗಳ ಮಾರಣ ಹೋಮವಾಗಿರುವ ಘಟನೆ ಕುದುರಗುಂಡಿ ಗ್ರಾಮದ ಕೆರೆಯಲ್ಲಿ ಜರುಗಿದೆ.
ಕೆರೆಯ ನೀರನ್ನು ಬಳಕೆ ಮಾಡುತ್ತಿರುವ ಜನ ಜಾನುವಾರುಗಳ ಆರೋಗ್ಯದ ಮೇಲೂ ಸಹ ಪರಿಣಾಮ ಬೀರುತ್ತಿದ್ದು, ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ.
ಗೆಜ್ಜಲಗೆರೆ ಮನ್ ಮುಲ್ ಡೇರಿಯಿಂದ ಹಾಲಿನ ಕ್ಯಾನ್ ಸ್ವಚ್ಛಗೊಳಿಸುವುದು ಸೇರಿದಂತೆ ಮತ್ತಿತರ ಕಾರ್ಯಗಳಿಗೆ ಬಳಕೆ ಮಾಡುವ ರಾಸಾಯನಿಕ ಮಿಶ್ರಿತ ನೀರನ್ನು ಪೈಪ್ ಮೂಲಕ ಕುದುರಗುಂಡಿ ಕೆರೆಗೆ ಹರಿಯ ಬಿಡಲಾಗುತ್ತಿದೆ.
ಇದರಿಂದ ಕೆರೆಯಲ್ಲಿ ಸಾಕಾಣಿಕೆ ಮಾಡುತ್ತಿದ್ದ ಒಂದು ವರ್ಷ ಮೀರಿದ ವಿವಿಧ ಜಾತಿಯ ಮೀನು ಮತ್ತು ಮರಿಗಳು ಸಾವನ್ನಪ್ಪುತ್ತಿದ್ದು, ಸುಮಾರು 8 ಲಕ್ಷ ರೂ ನಷ್ಟ ಉಂಟಾಗಿದೆ ಎಂದು ಮೀನುಗಳ ಸಾಕಾಣಿಕೆ ಹಕ್ಕು ಪಡೆದಿರುವ ಕುದುರಗುಂಡಿ ಗ್ರಾಮದ ಕೆ.ಎಂ.ಚನ್ನಪ್ಪ ಎಂಬುವರು ಮನ್ ಮುಲ್ ವಿರುದ್ಧ ಜಿಲ್ಲಾ ಪರಿಸರ ಮಾಲಿನ್ಯ ಕಛೇರಿಗೆ ದೂರು ನೀಡಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.