ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನರಿಂದ ತುಂಬಿ ತುಳುಕುತ್ತಿದ್ದ ನಮ್ಮ ಮೆಟ್ರೋ ರೈಲಿನಲ್ಲಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿ ಯುವತಿಯೊಬ್ಬಳು ತಲೆತಿರುಗಿ ಬಿದ್ದಿರುವ ಘಟನೆಯೊಂದು ಬುಧವಾರ ವರದಿಯಾಗಿದೆ.
ನೇರಳೆ ಮಾರ್ಗದಲ್ಲಿ ವೈಟ್‌ಫೀಲ್ಡ್-ಕೆಂಪೇಗೌಡ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣಕ್ಕೆ ತೆರಳುತ್ತಿದ್ದ ಮೆಟ್ರೋ ರೈಲಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣಿಸಿದ್ದು, ಈ ವೇಳೆ ಮಹಿಳೆ ತಲೆ ತಿರುಗಿ ಬಿದ್ದಿದ್ದಾರೆ. ಕೂಡಲೇ ಸಹ ಪ್ರಯಾಣಿಕರು ಅವರನ್ನು ರಕ್ಷಣೆ ಮಾಡಿ, ನೀರು ಕೊಟ್ಟಿದ್ದಾರೆ.
ಸಂಜೆ 6 ಗಂಟೆ ಸುಮಾರಿಗೆ ಕೆಆರ್ ಪುರ ಮೆಟ್ರೋ ನಿಲ್ದಾಣದಲ್ಲಿ ರೈಲು ಹತ್ತಿದ್ದೆ. ಈ ವೇಳೆ ರೈಲು ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು. ನಿಂತಿದ್ದ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ಬೀಳುತ್ತಿದ್ದರು. ಬಳಿಕ ಸ್ಥಳದಲ್ಲಿದ್ದವರು ಅವರಿಗೆ ಆಸನವನ್ನು ಬಿಟ್ಟುಕೊಟ್ಟು, ನೀರು ಕೊಟ್ಟರು. ಅಷ್ಟರಲ್ಲಿ ರೈಲು ಸ್ವಾಮಿ ವಿವೇಕಾನಂದ ರಸ್ತೆಯ ಮೆಟ್ರೋ ನಿಲ್ದಾಣ ತಲುಪಿತು.
ನಿಲ್ದಾಣದಲ್ಲಿದ್ದ ಸಿಬ್ಬಂದಿಗೆ ಸಹಾಯಕ್ಕಾಗಿ ಕೂಗಲಾಯಿತು. ಆದರೆ, ಆ ವ್ಯಕ್ತಿ ಪ್ರತಿಕ್ರಿಯಿಸಲಿಲ್ಲ. ಬಳಿಕ ಮೆಟ್ರೋ ಬಾಗಿಲು ಮುಚ್ಚಿತು. ಮತ್ತೆ ರೈಲು ಸಂಚರಿಸಲು ಆರಂಭಿಸಿತು. ಬಳಿಕ ತನ್ನ ಜೊತೆಗೆ ಬಂದಿದ್ದ ವ್ಯಕ್ತಿಯೊಂದಿಗೆ ಯುವತಿ ಹಲಸೂರು ಮೆಟ್ರೋ ನಿಲ್ದಾಣದಲ್ಲಿ ಇಳಿದು ಹೋದರು. ರೈಲಿನೊಳಗೆ ಯಾವ ರೀತಿ ಸಹಾಯ ಪಡೆಯಬೇಕೆಂಬುದು ಯಾರಿಗೂ ತಿಳಿದಿರಲಿಲ್ಲ ಎಂದು ಮೆಟ್ರೋದಲ್ಲಿದ್ದವರು ಮಾಹಿತಿ ನೀಡಿದ್ದಾರೆ.