ಹೊಸ ದಿಗಂತ ವರದಿ , ವಿಜಯಪುರ:
ಭೀಕರ ಬರದ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ವಿದೇಶ ಪ್ರವಾಸದಲ್ಲಿರುವುದು ಸರಿಯಲ್ಲ. ಬರ ಪೀಡಿತ ಪಟ್ಟಿಯಿಂದ ತಿಕೋಟಾ ಕೈ ಬಿಡಬಾರದು ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಆಗ್ರಹಿಸಿದರು.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಟಾಚಾರಕ್ಕೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬರ ತಾಲೂಕುಗಳ ಪಟ್ಟಿ ಮಾಡಿದೆ ಎಂದು ದೂರಿದರು.
ಕೇಂದ್ರದ ಬರ ಅಧ್ಯಯನ ತಂಡ ಬಬಲೇಶ್ವರ ಭಾಗದಲ್ಲಿ ಅಧ್ಯಯನ ಮಾಡಲು ಬರುತ್ತಿದೆ. ಆದಿಲ್ ಶಾಹಿ ಕಾಲದಿಂದಲೂ ಜಿಲ್ಲೆ ಬರದ ಹಣೆ ಪಟ್ಟಿ ಹೊತ್ತಿದೆ. ಜಿಲ್ಲೆಯಲ್ಲಿ ತಿಕೋಟಾ ತಾಲೂಕನ್ನು ಮಾತ್ರ ಬರದ ಪಟ್ಟಿಯಿಂದ ಕೈಬಿಟ್ಟಿರುವುದು ಇಲ್ಲಿನ ರೈತರಿಗೆ ಮಾಡಿದ ಅನ್ಯಾಯ ಎಂದು ಟೀಕಿಸಿದರು.
ತಿಕೋಟವನ್ನು ಬರ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದೇನೆ.
ಸರ್ಕಾರ ರೈತರ ಬಗ್ಗೆ ಚಿಂತನೆ ಮಾತ್ರ ಮಾಡುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ.
ನಾಳೆ ಕೇಂದ್ರ ಬರ ಅಧ್ಯಯನ ತಂಡ ತಿಕೋಟಾದಲ್ಲಿ ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು.