ಹೊಸದಿಗಂತ ಡಿಜಿಟಲ್ ಡೆಸ್ಕ್
ವೈದ್ಯಕೀಯ ಶಿಕ್ಷಣವು ಎಲ್ಲರ ಕೈಗೆಟಕುವಂತೆ ಮಾಡಲು ಕೇಂದ್ರ ಸರ್ಕಾರವು ಶ್ರಮಿಸುತ್ತಿದ್ದು ಮುಂದಿನ 10 ವರ್ಷಗಳಲ್ಲಿ ಭಾರತದಲ್ಲಿ ದಾಖಲೆಯ ಸಂಖ್ಯೆಯಲ್ಲಿ ವೈದರು ಹೊರಹೊಮ್ಮಲಿದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶುಕ್ರವಾರ ಗುಜರಾತ್‌ನ ಭುಜ್ ನಲ್ಲಿರುವ ಕೆಕೆ ಪಟೇಲ್ ಸುಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತಾಡಿದ ಅವರು “ವೈದ್ಯಕೀಯ ಶಿಕ್ಷಣವು ಎಲ್ಲರಿಗೂ ಸುಲಭವಾಗಿ ದೊರೆಯುವಂತೆ ಮಾಡಲು ಕೇಂದ್ರ ಸರ್ಕಾರವು ಶ್ರಮಿಸುತ್ತಿದೆ. ದೇಶದ ಪ್ರತೀ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗುತ್ತದೆ. ಆ ಮೂಲಕ ಉತ್ತಮ ಆರೋಗ್ಯ ಸೌಕರ್ಯವನ್ನು ಪ್ರತಿಯೊಬ್ಬರಿಗೂ ಒದಗುವಂತೆ ಮಾಡಲಾಗುತ್ತದೆ ತನ್ಮೂಲಕ ಮುಂದಿನ ಹತ್ತು ವರ್ಷಗಳಲ್ಲಿ ಭಾರತವು ದಾಖಲೆಯ ಸಂಖ್ಯೆಯಲ್ಲಿ ವೈದ್ಯರನ್ನು ಸೃಷ್ಟಿ ಮಾಡಲಿದೆ.”
“ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ಉನ್ನತ ವೈದ್ಯಕೀಯ ಸೌಲಭ್ಯಗಳು ದೊರೆಯುವಂತೆ ಮಾಡಿದಾಗ ಆತ ವ್ಯವಸ್ಥೆಯ ಮೇಲೆ ಭರವಸೆ ಇಡುವಂತಾಗುತ್ತದೆ. ʼಉತ್ತಮ ಆರೋಗ್ಯ ಸೌಕರ್ಯʼ ಎಂಬುದು ಕೇವಲ ಚಿಕಿತ್ಸೆಗಷ್ಟೇ ಸೀಮಿತವಾಗಿಲ್ಲ ಬದಲಾಗಿ ಸಾಮಾಜಿಕ ನ್ಯಾಯದ ಭಾಗವಾಗಿದೆ” ಎಂದು ನುಡಿದಿದ್ದಾರೆ.
ಕೆಕೆ ಪಟೇಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಶ್ರೀ ಕಚ್ಚಿ ಲೇವಾ ಪಟೇಲ್ ಸಮಾಜ, ಭುಜ್ ವತಿಯಿಂದ ನಿರ್ಮಿಸಲಾಗಿದೆ. ಪ್ರಧಾನ ಮಂತ್ರಿ ಕಾರ್ಯಾಲಯದ ಪ್ರಕಾರ, ಇದು ಕಚ್‌ನಲ್ಲಿರುವ ಮೊದಲ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದು 200 ಹಾಸಿಗೆಗಳೊಂದಿಗೆ, ಇಂಟರ್ವೆನ್ಷನಲ್ ಕಾರ್ಡಿಯಾಲಜಿ (ಕ್ಯಾಥ್ಲ್ಯಾಬ್), ಕಾರ್ಡಿಯೊಥೊರಾಸಿಕ್ ಸರ್ಜರಿ, ರೇಡಿಯೇಶನ್ ಆಂಕೊಲಾಜಿ, ಮೆಡಿಕಲ್ ಆಂಕೊಲಾಜಿ, ಸರ್ಜಿಕಲ್ ಆಂಕೊಲಾಜಿ, ನೆಫ್ರಾಲಜಿ, ಮೂತ್ರಶಾಸ್ತ್ರ, ನ್ಯೂಕ್ಲಿಯರ್ ಮೆಡಿಸಿನ್, ನ್ಯೂರೋ ಸರ್ಜರಿ, ಜಾಯಿಂಟ್ ರಿಪ್ಲೇಸ್ಮೆಂಟ್ ಮತ್ತು ಇತರ ವಿಶೇಷ ಸೇವೆಗಳನ್ನು ಒದಗಿಸುತ್ತದೆ.